ಶಿಲ್ಪಕಲೆಯ ಸಾಮ್ರಾಜ್ಯವನ್ನೇ
ತನ್ನ ಮಡಿಲಿನಲ್ಲಿರಿಸಿಕೊಂಡು ಪ್ರಜ್ವಲಿಸುತ್ತಿರುವ ಜಿಲ್ಲೆ ಹಾಸನ. ನಗರದ ಹಳೇ ಬಸ್ ನಿಲ್ದಾಣದ
ಬಳಿ ಇರುವ ಕಟ್ಟಿನಕೆರೆ ಮಾರುಕಟ್ಟೆಯ ಪಕ್ಕದಲ್ಲಿ ಇರುವ ಕೆರೆಯನ್ನು ‘ದೇವಿಗೆರೆ' ಎಂದು ಕರೆಯಲು ಇಲ್ಲಿನ ಸ್ಥಳ ಪುರಾಣವೆ
ಕಾರಣವಾಗಿದೆ.
ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ
ಮತ್ತು ಚಾಮುಂಡಿ ಈ ಸಪ್ತಮಾತೃಕೆಯರು ವಾರಣಾಸಿ(ಕಾಶಿ)ಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕೆಂದು
ಬಂದಾಗ ಇಲ್ಲಿನ ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ ಕಂಡು ಮನ ಸೋತಿ
ಇಲ್ಲಿಯೇ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವೈಷ್ಣವಿ, ಕುಮಾರಿ ಮತ್ತು ಮಹೇಶ್ವರಿ ಹಾಸನದ
ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆ. ಬ್ರಾಹ್ಮೀ ದೇವಿ ಕೆಂಚಮ್ಮನ
ಹೊಸಕೋಟೆಯಲ್ಲಿ ನೆಲೆಯೂರಿದಳು. ಇನ್ನುಳಿದ ದೇವತೆಗಳಾದ ಚಾಮುಂಡಿ, ವರಾಹಿ
ಮತ್ತು ಇಂದ್ರಾಣಿ ದೇವಿಗೆರೆಯ ಮಧ್ಯಭಾಗದಲ್ಲಿ ನೆಲೆಸಿದರು ಎಂಬ ಐತಿಹ್ಯವಿದೆ. ಈಗಲೂ ಈ
ಕೆರೆಯೊಳಗೆ ಮೂರು ದೇವಾಲಯಗಳಿವೆ ಎಂಬ ಪ್ರತೀತಿಯಿದೆ. ದೇವತೆಗಳ ನೆಲೆವೀಡಾದ್ದರಿಂದ ಹಾಗೂ
ಸಪ್ತಮಾತೃಕೆಯರು ಇಲ್ಲಿ ಜಲ ಕ್ರೀಡೆಯಾಡಲು ಬರುತ್ತಿದ್ದುದರಿಂದ ಈ ಕೆರೆಯನ್ನು ದೇವಿಯರ ಕೆರೆ, ದೇವಿಕೆರೆ
ಎಂದು ಕರೆಯುತ್ತಿದ್ದು. ಈಗ ಆಡು ಮಾತಿನಲ್ಲಿ ದೇವಿಗೆರೆ ಎಂದಾಗಿದೆ. ಇದಕ್ಕೆ ಸಪ್ತಮಾತೃಕೆಯರ
ಕಲ್ಯಾಣಿ ಎಂದು ಸಹ ಹೆಸರಿದೆ.
ಹೊಳೆನರಸೀಪುರದ
ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿರುವ ಶಾಸನದ ಪ್ರಕಾರ ದೇವಿಗೆರೆಗೆ ಹಿಂದೆ ದೇವರಕೆರೆ ಎಂದು
ಹೆಸರಿತ್ತು. ಕೆರೆಯ ಮುಂದೆ ಪುರುಷ ದೇವರುಗಳ ಮೂರ್ತಿಗಳೆ ಇರುವುದರಿಂದ ದೇವರಕೆರೆ ಎನ್ನಲಾಗಿದ್ದು, ಹಾಸನದ
ಗ್ರಾಮ ದೇವತೆ ಹಾಸನಾಂಬೆ ಪ್ರಚಾರಕ್ಕೆ ಬಂದಂತೆ ದೇವರಕೆರೆ ಎನ್ನುವುದು ದೇವಿಕೆರೆ ಈಗ ದೇವಿಗೆರೆ
ಎಂದಾಗಿದೆ ಎಂಬ ಸತ್ಯ ತಿಳಿಯಿತ್ತದೆ.
ಸುಮಾರು 13ನೆಯ
ಶತಮಾನದಲ್ಲಿ ಹೊಯ್ಸಳರ ಅರಸ ಎರಡನೆಯ ನರಸಿಂಹ ಈ ಕೆರೆಯನ್ನು ನಿರ್ಮಾಣ
ಮಾಡಿದ್ದಾಗಿ ಶಾಸನದಿಂದ ತಿಳಿದುಬರುತ್ತದೆ. ಕೆರೆಯ ದಡದಲ್ಲಿ ಗಣಪತಿ, ಗಂಗಾಧರೇಶ್ವರ, ಚಿದಂಬರೇಶ್ವರ, ಅಶ್ವತ್ಥಕಟ್ಟೆ, ಕೊಳಲು
ಗೋಪಾಲಸ್ವಾಮಿಯ ದೇವಾಲಯಗಳೂ ಆ ಕಾಲದಲ್ಲೇ ನಿರ್ಮಾಣವಾಗಿದೆ. ಊರಿನ ಹೆಬ್ಬಾಗಿಲಿನಲ್ಲಿ ಈ ದೇವಾಲಯವಿದೆ, ಕಾಲ ಕ್ರಮೇಣ ನಗರ
ಬೆಳೆದಂತೆ ಈ ಜಾಗ ಹಾಸನದ ಹೃದಯ ಭಾಗವಾಯಿತು.
ದೇವಿಗೆರೆಯನ್ನು ನಿರ್ಮಿಸುವ
ಮೊದಲು ಯಾವುದೇ ಲೋಪಗಳಾಗದಂತೆ ಇಲ್ಲಿ ಚಿಕ್ಕಗಣಪತಿಯನ್ನು ಪ್ರತಿಷ್ಠಾಪನೆಯಾಯಿತು. ಹಾಗೂ ಇಲ್ಲಿರುವ
ಕೊಳಲು ಗೋಪಾಲಸ್ವಾಮಿ ದೇವಾಲಯದಲ್ಲಿರುವ ಮೂಲ ವಿಗ್ರಹ ಅದ್ಭುತ ಶಿಲ್ಪ ಕಲೆಯಿಂದ ಕೂಡಿದೆ.
ಶ್ರೀ ಕೃಷ್ಣನು ಕೋಳಲು ನುಡಿಸುವ
ರೀತಿಯಲ್ಲಿರುವ ಈ ಶಿಲ್ಪ ಐದು ಅಡಿ ಎತ್ತರವಿದೆ. ಅಕ್ಕ ಪಕ್ಕದಲ್ಲಿ ಶ್ರೀದೇವಿ ಹಾಗೂ ಭೂದೇವಿಯರ
ವಿಗ್ರಹವಿದೆ ಜೋತೆಗೆ ವಿಷ್ಣವಿನ ದಶ ಅವತಾರಗಳನ್ನು ಇಲ್ಲಿ ಕೆತ್ತಲಾಗಿದೆ. ಕೃಷ್ಣನ ಮೇಲೆ ಮಂದಾರ
ವೃಕ್ಷವಿದ್ದು ಜೋತೆಗೆ ಋಷಿ ಮುನಿಗಳು,
ಗೋಪಿಕಾ ಸ್ತ್ರೀಯರು ಹಸು ಕರುಗಳು, ಗೊಲ್ಲರು
ಕೃಣ್ಣನ ಹಿಂದೆ ಆದಿಶೇಷ ಸಹ ಇದೆ. ಶ್ರೀ ಕೃಷ್ಣನ ಕೂದಲನ್ನು ತುರುಬಿನಿಂದ ಕಟ್ಟಿರುವ
ದೃಶ್ಯ ಸಹ ನಾವು ನೋಡಬಹುದಾಗಿದೆ. ಈ ದೇವಾಲಯದ ಗರ್ಭಗುಡಿ ಸೂರ್ಯನ ನವರಂಗವನ್ನು
ಹೊಂದಿದ್ದು ದೇವಾಲಯದ ಹೊರಗೆ ಎರಡು ಆನೆಗಳ ಪ್ರತಿಮೆ ಇದೆ. ಇಲ್ಲಿ ಶ್ರೀ
ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ನೆರವೇರುತ್ತದೆ.
ಗಂಗಾಧರೇಶ್ವರ ದೇವಾಲಯದ ಮೂಲ
ವಿಗ್ರಹ ಶಿವಲಿಂಗದ ರೂಪದಲ್ಲಿದ್ದು, ಲಿಂಗಕ್ಕೆ ವೀರಭದ್ರಸ್ವಾಮಿಯ ಮುಖವಾಡ ಹಾಕಲಾಗಿದೆ.
ಈ ದೇವಾಲಯದ ಎದುರು ಸಹ ಎರಡು ಆನೆಗಳಿವೆ. ಹಾಗೂ ಈ ದೇವಾಲಯದ
ಪಕ್ಕದಲ್ಲಿ ಚಿದಂಬರೇಶ್ವರ ದೇವಾಲಯವಿದೆ ಇದರ ಎದುರುಗಡೆಗೆ ಒಂದು
ಅಶ್ವತ್ಥಕಟ್ಟೆ ಇದ್ದು ಈ ಕಟ್ಟೆಯ ಸುತ್ತಲು ನಾಗರ ಕಲ್ಲುಗಳಿವೆ.
ಇವುಗಳು ಪುರಾತನ ದೇವಾಲುಯಗಳಾದರೆ
ನಂತರ ದಿನಗಳಲ್ಲಿ ಸತ್ಯನಾರಾಯಣ, ನವಗ್ರಹ ಹಾಗೂ ಲಕ್ಷ್ಮೀವೆಂಕಟೇಶ್ವರ ಸ್ವಾಮಿ
ದೇವಾಲಯಗಳನ್ನು ಇವುಗಳ ಪಕ್ಕದಲ್ಲಿ ನಿರ್ಮಾಣವಾಗಿದೆ. ಈ ಎಲ್ಲಾ ದೇವಾಲಯಗಳು ಸಾಲು ಸಾಲಾಗಿದ್ದು. ಈ ಸ್ಥಳವಿದ್ದು ಶಿವ ಮತ್ತು ವಿಷ್ಣುವಿನ ಸಂಗಮ ಕ್ಷೇತ್ರವಾಗಿದೆ.
No comments:
Post a Comment