Thursday, December 4, 2014

ಮಂಗಳೂರಿನ ಗ್ರಾಮದೇವಿ ಮಂಗಳದೇವಿ

ಮಂಗಳಾದೇವಿ ಯಿಂದ ಮಂಗಳೂರು ತನ್ನ
ಹೆಸರನ್ನು ಪಡೆದುಕೊಂಡಿದೆ.
ಮತ್ಸ್ಯೇಂದ್ರನಾಥನೆಂಬ ನಾಥ್ ಪಂಥದ
ಮುಖ್ಯಪುರುಷ, ಪ್ರೇಮಲಾದೇವಿ ಎಂಬ ಕೇರಳ ದ
ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ.
ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ
ಪರಿವರ್ತಿಸಿಕೊಂಡು "ಮಂಗಳಾದೇವಿ"
ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ
ಅನಾರೋಗ್ಯದಿಂದ ಮಂಗಳಾದೇವಿಯು ನಿಧನ
ಹೊಂದಿದ್ದರಿಂದ ಅವರು ತಮ್ಮ
ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ
. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರ ದಲ್ಲಿ
ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು.
ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ
ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು.
ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ
ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ.
ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ಮಂಗಲಾಪುರಂ
ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ
ಪ್ರಯಾಣಿಕ ಇಬ್ನ್ ಬತೂತ ಮಂಗಳೂರನ್ನು ಮಂಜರೂರ್
ಎಂದು ಉಲ್ಲೇಖಿಸಿದ್ದಾನೆ. ಕ್ರಿ.ಶ. ೧೫೨೬ರಲ್ಲಿ
ಪೋರ್ಚುಗೀಸರು
ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ
ಮ್ಯಾಂಗಲೋರ್ (ಇದು ಮಂಗಳೂರು ಎಂಬುದರ
ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ
೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದಾಗ ಈ
ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ
ಮಿಳಿತಗೊಂಡಿತು.
ಮಂಗಳೂರು ನಗರದಲ್ಲಿ
ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ
ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ
ಮೂಲನಿವಾಸಿಗಳಾದ ತುಳುವ ರು ಮಾತನಾಡುವ
ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ.
ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು
ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ
ಸ್ಥಳೀಯ ತುಳುವರ ಇದನ್ನು ಕುಡ್ಲ
ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ
ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ
ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆ ಯಲ್ಲಿ
ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ.
ಮೈಕಾಲ ಎಂದರೆ ಇದ್ದಿಲು ಎಂದರ್ಥ. ಹಿಂದಿನ
ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ
ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ
ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ
ಕೇರಳೀಯರು ಮಂಗಳೂರನ್ನು ಮಂಗಲಾಪುರಂ
ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು
ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.ಹವ್ಯಕ
ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ
ಎಂದು ಕರೆಯುವುದು ರೂಡಿಯಲ್ಲಿದೆ.

Friday, July 25, 2014

ಇತಿಹಾಸದ ಗರ್ಭದಲ್ಲಿ ತಾಳೂರು ಮಾರುತಿ


ಇತಿಹಾಸಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರ ಹಾಗೂ ಅಮೂಲ್ಯವಾದುದು. ಬೇಲೂರು, ಹಳೇಬೀಡುಗಳ ವಾಸ್ತುಶಿಲ್ಪ,. ಹಲ್ಮಿಡಿಯ ಪುರಾತನ ಶಾಸನ, ಸಕಲೇಶಪುರದ ವನಸಿರಿ ಮತ್ತು ಟಿಪ್ಪುವಿನ ಮಂಜರಾಬಾದ್ ಕೋಟೆ, ಶ್ರವಣಬೆಳಗೊಳದ ವಿಶ್ವವಿಖ್ಯಾತ ಏಕ ಶಿಲಾಮೂರ್ತಿ, ರಾಮನಾಥಪುರದ ಇತಿಹಾಸ, ಹಾಸನಾಂಬೆಯ ಅಚ್ಚರಿಯ ದಿವ್ಯಶಕ್ತಿ. ಹೀಗೆ ಹತ್ತು-ಹಲವು ರಾಜವಂಶಗಳ ಕಲೆ ಸಂಸ್ಕøತಿಯ ಗತ ವೈಭವವನ್ನೇ ನೆನಪಿಸುತ್ತದೆ. ಕರ್ನಾಟಕ ಇತಿಹಾಸದಲ್ಲಿ ತನ್ನದೇ ಆದ ಭದ್ರ ಛಾಯೆ ಮೂಡಿಸಿದೆ.
ಆಲೂರು ತಾಲ್ಲೂಕು ಸಹ ಇದಕ್ಕೇನೂ ಹೊರತಾಗಿಲ್ಲ. ಕೆಂಚಾಂಬಿಕೆಯ ಮಡಿಲು ದಟ್ಟ ವನಸಿರಿ, ಪಾಳ್ಯದ ಇತಿಹಾಸ ಹೀಗೆ ತನ್ನದೇ ಆದ ಐತಿಹಾಸಿಕ ಬೆಳಕನ್ನು ಮೂಡಿಸಿದೆ.
ಆಲೂರು ಪಟ್ಟಣದ ಬಿಕ್ಕೋಡು ಮಾರ್ಗವಾಗಿ 6 ಕಿ.ಮೀ ಕ್ರಮಿಸಿ ಬಲಕ್ಕೆ ಹೊರಳಿ ಮೂರು ಕಿ.ಮೀ ಸಾಗಿದರೆ ಹಸಿರು ತುಂಬಿದ ಪರಿಸರದೊಳಗೆ ಕಾಣಸಿಗುವುದೇ ತಾಳೂರು. ತಾಳೂರಿಗೆ ಈ ಹಸಿರ ವನಸಿರಿ ತಂದು ಕಂಗೊಳಿಸುವಂತೆ ಮಾಡಿರುವಳೆಂದರೆ ‘ವಾಟೆಹೊಳೆ’ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಅಲ್ಲಿನ ಜನ ಸಮುದಾಯ ಇವಳ ಬಲದಂಡೆ ನಾಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಸುಮಾರು 60ರಿಂದ 70 ಕುಟುಂಬಗಳಿರುವ ಈ ಊರಲ್ಲಿ ಶೇ%75ರಷ್ಟು ಕೂಲಿ ಕೆಲಸವನ್ನು ನಂಬಿ ಬದುಕು ಸವೆಸುತ್ತಿರುವುದು ಸಾಮಾನ್ಯ. ಹೆಚ್ಚಾಗಿ ದಲಿತರಿರುವ ಈ ಊರಲ್ಲಿ ಬಡತನ ತಾಂಡವವಾಡುತ್ತಿದೆ. ಹತ್ತಾರು ಮನೆಗಳು ತಕ್ಕ ಮಟ್ಟಿಗೆ ಹಿಡುವಳಿದಾರರಿದ್ದಾರೆ. ಅದೂ ಮಳೆ ಕೈಕೊಟ್ಟರೆ, ವಾಟೆಹೊಳೆಗೆ ಜಲಾಗಮನ ಆಗದಿದ್ದರೆ, ಇಲ್ಲಿನ ಜನತೆಗೆ ಆಸರೆಯೇ ಇಲ್ಲದಂತಾಗುತ್ತದೆ.
ಇವರಿಗೆ ನಿತ್ಯ ಉಸಿರಾಗಿರುವಳು ವಾಟೆಹೊಳೆ. ಇವಳು ಬೇಲೂರು ತಾಲ್ಲೂಕಿನ ನಾಗೇನಹಳ್ಳಿ ಬಳಿಯಲ್ಲಿ ಜನ್ಮತಾಳಿ ಸಾಗಿ ಬಂದು ವಾಟೆಹೊಳೆ ಎಂಬಲ್ಲಿ ನೆಲೆನಿಂತು ಮುಂದೆ ತಾಳೂರು ಮಾರ್ಗವಾಗಿ ಹರಿದು ತಾಲ್ಲೂಕಿನಾದ್ಯಾಂತ ಹಸಿರು ಜೀವ ಬೆಸೆದು ಚೆನ್ನಾಪುರ ಬಳಿ ಯಗಚಿಗೆ ಸಂಗಮವಾಗುತ್ತಾಳೆ.
ತಾಳೂರು ಹನುಮಂತರಾಯನ ಮಹಿಮೆಯಿಂದ ಪ್ರಸಿದ್ಧವಾದ ಸ್ಥಳ. ಜಿಲ್ಲೆ, ಅಂತರ್‍ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಮಾರುತಿಯ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಹನುಮಂತರಾಯನ ವಿಗ್ರಹ ಪ್ರತಿಷ್ಠಾಪನೆ ಹೊಯ್ಸಳರ ಕಾಲದಲ್ಲಿ ಆಗಿದೆ. ಈ ಪ್ರದೇಶವು ಬನವಾಸಿ ಕದಂಬರ ಆಡಳಿತಕ್ಕೆ ಒಳಪಟ್ಟಿದ್ದು, ನಂತರ ಗಂಗರ ವಶವಾಗಿ, ಗಂಗರ ಅವನತಿಯ ನಂತರ ಮಲೆನಾಡಿನ ಪಾಳೆಯಗಾರರ ಅಧೀನಕ್ಕೆ ಬಂದು ತದನಂತರ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತು ಎನ್ನಲಾಗಿದೆ. ಹಾಗೂ ಈ ಪ್ರಾಂತ್ಯದಲ್ಲಿ ಮಹದೇವನೆಂಬ ರಾಜನಿದ್ದ. ಇವರ ಅವನತಿ ನಂತರ ಕೃಷ್ಣದೇವರಾಯನು ಐಗೂರು ಕೃಷ್ಣಪ್ಪ ನಾಯಕನಿಗೆ ವಹಿಸಿಕೊಟ್ಟನೆಂಬ ಹಿನ್ನಲೆಯಿದೆ.
ತಾಳೂರು ಗ್ರಾಮದಲ್ಲಿ ಈ ಹಿಂದೆ ಚೋಳ ವಂಶದ ಪುಂಡಲೀಕ ಎಂಬಾತ ಸುತ್ತಮುತ್ತಲಿನ ಸುಮಾರು 250-300 ಎಕರೆ ಪ್ರದೇಶವನ್ನು ತನ್ನ ಆಳ್ವಿಕೆಯ ಅಧೀನದಲ್ಲಿಟ್ಟುಕೊಂಡು, ಪ್ರಜೆಗಳಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿಕೊಂಡು ಸಂತೋಷದಿಂದ ಸುಖಮಯವಾಗಿ ಜೀವನ ಸಾಗಿಸುತ್ತಿದ್ದರು. ಈ ಹಿಂದೆ ಈ ಊರಲ್ಲಿ ವಾಸಿಸಿದ್ದ ಜನರು ತುಂಬಾ ತಾಳ್ಮೆಯಿಂದ ವರ್ತಿಸುತ್ತಿದ್ದರಂತೆ. ಅದಕ್ಕಾಗಿ ಈ ಊರಿಗೆ ‘ತಾಳೂರು’ ಎಂಬ ಹೆಸರು ಬಂದಿರಬೇಕು. ಆದರೆ ಇಲ್ಲಿ ಆಡಳಿತ ನಡೆಸುತ್ತಿದ್ದ ಪುಂಡಲೀಕನ ಅಟ್ಟಹಾಸ, ಭ್ರಷ್ಟಾಡಳಿತ, ಮೋಸದ ಕೃತ್ಯಗಳು ದಿನೇ-ದಿನೇ ಅಧಿಕಗೊಂಡಿದ್ದರಿಂದ ತಾಳ್ಮೆಕಳೆದುಕೊಂಡ ತಾಳೂರಿನ ಜನತೆ ದೊರೆಯ ವಿರುದ್ದ ಹೋರಾಟ ಮಾಡಿ, ರಕ್ತದ ಕೋಡಿಯನ್ನೇ ಹರಿಸಿದರಂತೆ!. ಇದರಿಂದ ತಾಳೂರು ಗ್ರಾಮಕ್ಕೆ ಹಾಳೂರು ಎಂಬ ವಾಡಿಕೆ ರೂಢಿಯಾಯಿತಂತೆ. ಏಕೆಂದರೆ ಗಲಭೆಯ ನಂತರ ಒಂದು ನರಪಿಳ್ಳೆಯು ಇಲ್ಲದಂತೆ ಪಲಾಯನವಾಗಿತ್ತಂತೆ. ಹಾಳೂರು ಎಂಬ ವಾಡಿಕೆಯನ್ನು ಹೋಗಲಾಡಿಸಲು ಆನಂತರ ತುಂಬಾ ಪ್ರಯತ್ನ ನಡೆಸಿದೆ. ಕಾಲಾಂತರವಾಗಿ ತಾಳೂರಿನ ಪುಂಡಲೀಕ ದೊರೆಗೆ ಪ್ಲೇಗ್ ರೋಗ ತಗುಲಿ, ಈ ರೋಗದಿಂದ ಮುಕ್ತಿ ಕಾಣಲು ಹಲವಾರು ಪುರೋಹಿತರ ಮೊರೆ ಹೋದಾಗ ಶನಿಕಾಟದ ಕಾರಣ ತಿಳಿದು ಪಾಪದ ಪರಿಹಾರಕ್ಕಾಗಿ ತನ್ನ ದಂಡ ನಾಯಕನಿಗೆ ಊರ ಕೋಟೆಯ ದ್ವಾರ ಬಾಗಿಲು ಹತ್ತಿರ ಹನುಮಂತರಾಯನ ಪ್ರತಿಮೆ ಕೆತ್ತಿಸಿ ಪ್ರತಿಷ್ಟಾಪಿಸುವಂತೆ ಅಜ್ಞಾಪಿಸಿದನಂತೆ! ಅದನ್ನು ಪಾಲಿಸಿದ ದಂಡನಾಯಕ ವರದರಾಜು ಎಂಬ ಶಿಲ್ಪಿಯನ್ನು ಕರೆಸಿ ಸುಮಾರು ಒಂಭತ್ತೂವರೆ ಅಡಿ ಎತ್ತರವಿರುವ ಹನುಮಂತರಾಯನ ಪ್ರತಿಮೆಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿದರು.
ನಂತರ ಪುಂಡಲೀಕ ದೊರೆಯು ತನ್ನ ಸರ್ವಸ್ವವನ್ನು ತ್ಯಜಿಸಿ ತಾಳೂರನ್ನು ಬಿಟ್ಟು ಹನುಮಂತರಾಯನ ಮಹಿಮೆಯನ್ನು ಸಾರುತ್ತಾ, ಜನರಿಗೆ ತಿಳಿಯಪಡಿಸುತ್ತಾ ತನ್ನ ಪಾಪ ಕರ್ಮದ ತೊಳಲಾಟವನ್ನು ಕಳೆದುಕೊಂಡನೆಂಬ ಪ್ರತೀತಿಯಿದೆ. ಇಂತಹ ಇತಿಹಾಸ ಹೊಂದಿದ ಈ ದಿವ್ಯ ಮಾರುತಿಯ ಸ್ಥಿತಿ ಶಿಥಿಲಗೊಂಡು ಚಿಂತಾಜನಕಗೊಂಡಾಗ ದೂರದೂರಿನಲ್ಲಿದ್ದ ಭಕ್ತರು ಭಂಟರಂತೆ ಬಂದು ಊರಿನವರೊಂದಿಗೆ ಸಮಾಲೋಚಿಸಿ ಸಮಿತಿ ರಚಿಸಿ ಜೀರ್ಣೋದ್ಧಾರ ಆರಂಭಿಸಿಯೇ ಬಿಟ್ಟರು.
ತಾಳೂರಿನ ಗ್ರಾಮಸ್ಥರಾದ ನಿಂಗೇಗೌಡ, ಸೋಮಣ್ಣ, ಹಾಲೇಗೌಡ, ಈಶ್ವರಪ್ಪ, ಜಯಣ್ಣ, ಶಿವರುದ್ರಪ್ಪ, ವೆಂಕಟೇಶ್ ಮುಂತಾದವರ ಸಹಕಾರದೊಂದಿಗೆ ಗ್ರಾಮಸ್ಥರನ್ನೊಳಗೊಂಡಂತೆ ಭಕ್ತಾದಿಗಳಾದ ಡಾ|| ಕೃಷ್ಣೇಗೌಡ, ಹೆಚ್.ಕೆ.ಸುರೇಶ್, ಚೆಲುವೇಗೌಡ, ಶಂಕರ್, ನಂಜುಂಡೇಗೌಡ, ಅಣ್ಣಯ್ಯ, ಬಿ.ಎಸ್ ಗಂಗೇಗೌಡ, ಶಿವಲಿಂಗೇಗೌಡ,  ರಂಗೇಗೌಡ, ಡಾ||ಮೋಹನ್‍ಕುಮಾರ್, ಲಂಕೇಗೌಡ  ಮುಂತಾದ ಭಕ್ತಾದಿಗಳು ಕೈ ಜೋಡಿಸಿದ್ದರಿಂದ ಸುಮಾರು 15 ರಿಂದ 16 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ದಾರವಾಗಿ ಮಾರುತಿ ಪುನಃ ಸಿಡಿದು ನಿಂತಿದ್ದಾನೆ. ಮತ್ತೆ ಗತದ ವೈಭವ ಮರುಕಳಿಸಿದೆ. ದಿನಾಂಕ: 22-12-2007ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಹನುಮಂತರಾಯನ ದೇವಸ್ಥಾನ ಅನಾವರಣಗೊಂಡಿದೆ. ಇದರ ಬೆನ್ನಲ್ಲೇ ಶಿಥಿಲಗೊಂಡಿದ್ದ ಈಶ್ವರ ದೇವಾಲಯ ಕೂಡ ಶೀಘ್ರಗತಿಯಲ್ಲಿ ಜೀರ್ಣೋದ್ದಾರಗೊಂಡು ಅದು ಸಹ ಅಂದೇ ಉದ್ಘಾಟನೆಗೊಂಡಿತು. ತಾಳೂರಿಗೆ ಮತ್ತೆ ಗತದ ನೆನಪು ಮರುಕಳಿಸಿದಂತಾಗಿದೆ. ಪ್ರತಿವರ್ಷ ಇಲ್ಲಿ ಹನುಮಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ಸಾವಿರಾರು ಭಕ್ತಾಧಿಗಳು ಬರುತ್ತಾರೆ. ಭಕ್ತಿಯ ಜೊತೆಗೆ ಅನ್ನ ಸಂತರ್ಪಣೆಯೂ ಸಹ ವಿಶೇಷವಾಗಿರುತ್ತದೆ. ನೀರಿನ ಸೌಕರ್ಯ ಚೆನ್ನಾಗಿದೆ. ಇತ್ತೀಚೆಗೆ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತದಲ್ಲಿ ಉತ್ತಮ ಸೌಕರ್ಯವುಳ್ಳ ಅತಿಥಿಗೃಹಗಳು ಹಾಗೂ ಸಮುದಾಯ ಭವನ ದೇವಸ್ಥಾನದ ಸಮಿತಿಯ ಶ್ರಮದ ಫಲವಾಗಿ ನಿರ್ಮಾಣಗೊಂಡಿದೆ. ಹನುಮಂತರಾಯನ ಸನ್ನಿಧಿಗೆ ಬರುವ ಭಕ್ತಾಧಿಗಳಿಗೆ ಈಗ ಚಿಂತೆಯಿಲ್ಲ, ಏಕೆಂದರೆ ಬೆಳಗ್ಗೆ 9-30ಕ್ಕೆ ಸಂಜೆ 5ಕ್ಕೆ ಪ್ರತಿದಿನ ತಾಳೂರಿಗೆ ಬಸ್ಸಿನ ಸೌಕರ್ಯ ಕಲ್ಪಿಸಲಾಗಿದೆ. ಹಾಗೆ ಟೆಂಪೋ, ಆಟೋಗಳು ನಿರಂತರವಾಗಿ ಸಂಚರಿಸುತ್ತಿವೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

Friday, May 30, 2014

ರಾಮನಾಥಪುರ


ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ. ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಪ್ರಖ್ಯಾತಿಗೊಂಡ್ಡು ರಾರಾಜಿಸುತ್ತದೆ.
ತ್ರೇತಾಯುಗದ ರಾಮಾಯಣಕ್ಕೂ ಈ ಕಲಿಯುಗದ ರಾಮನಾಥಪುರಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವನ್ನು ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರ ಹಾಗೂ ಈ ಕಲಿಯುಗದಲ್ಲಿ ರಾಮನಾಥಪುರ, ದಕ್ಷಿಣಕಾಶಿ, ಭಾಸ್ಕರ ಕ್ಷೇತ್ರವೆಂದು ಕರೆಯಲಾಗುತ್ತಿದ್ದು ಇವುಗಳಿಗೆ ಗ್ರಾಮದಲ್ಲಿರುವ ಕುರುಹುಗಳೇ ಸಾಕ್ಷಿಯನ್ನು ಬದಗಿಸುತ್ತಿದೆ.
ತ್ರೇತಯುಗದಲ್ಲಿ ಲಂಕಾಧಿಪತಿ ಬ್ರಾಹ್ಮಣವಾದ ರಾವಣನನ್ನು ಲೋಕೋದ್ಧಾಕ್ಕಾಗಿ ಸಂಹರಿಸಿದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ ಮೇಲೆ ಬ್ರಾಹ್ಮಣನಾದ ರಾವಣನ ಅಸುರ ಪರಿವಾರವನ್ನು ಸಂಹರಿಸಿದ್ದರಿಂದ ಬ್ರಹ್ಮಹತ್ಯಾ ದೋಷಪರಿಹರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಅಲ್ಲದೇ ಕುಲಗುರು ವಶಿಷ್ಠರ ಬತ್ತಾಸೆ ಮೇರೆಗೆ ಪುಷ್ಟಕ ವಿಮಾನದಲ್ಲಿ ಪರಿವಾರ ಸಮೇತ ರಾಮನಾಥಪುರ(ವಾಸವಾಪುರಿ)ಕ್ಕೆ ಬಂದು ಅಗಸ್ತ್ಯ ಋಷಿಗಳು ವಿಹ್ನಿ ಪುಷ್ಕರಣಿಯ ಸಮೀಪದಲ್ಲಿ ಉದ್ಭವಿಸಿರುವ ಶಿವಲಿಂಗದ ವಿಷಯವನ್ನು ರಾಮನಿಗೆ ತಿಳಿಸಿದಾಗ ಅದನ್ನು ಹುಡುಕಿ ಪುಷ್ಕರಣಿಯಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸುತ್ತಾನೆ. ಈ ಮೂಲಕ ದೋಷ ಪರಿಹರಿಸಿಕೊಂಡ ಎಂಬುದು ಇತಿಹಾಸ ತಿಳಿಸುತ್ತದೆ. ವಾಸವಾಪುರಿ ಎಂದು ಕರೆಸಿಕೊಂಡಿದ್ದ ಗ್ರಾಮ ಅಂದಿನಿಂದ ರಾಮನಾಥಪುರ ಎಂದಾಯಿತು ಎನ್ನುತ್ತವೆ ಸ್ಥಳ ಪುರಣ.
ರಾಮನಾಥಪುರದಲ್ಲಿ ಸುಬ್ರಹ್ಮಣ್ಯ, ಅಗಸ್ತ್ಯೇಶ್ವರ, ರಾವೇಶ್ವರ, ಪಟ್ಟಬಿರಾಮ, ಲಕ್ಷಿನರಸಿಂಹ, ವಾಸವಪುರಿ ಆಂಜನೇಯ, ಶ್ರೀ ಪರಕಾಲ ಮಠದ ಹಯಗ್ರೀವಸ್ವಾವ, ಆರ್ಯ ವೈಶ್ಯ ಛತ್ರದಲ್ಲಿ ಕನ್ನಿಕಾಪರವೇಶ್ವರಿ, ವರದಾನ ಬಸವೇಶ್ವರ, ಕಾಲುವೆಯಮ್ಮ, ಲಕ್ಷ್ಮಣೇಶ್ವರ ದೇವಾಲಯಗಳಿಂದ ಧರ್ಮಪರಂಪರೆಯ ಮತ್ತು ಭಕ್ತಿಯ ಕೇಂದ್ರವಾಗಿದೆ.
2011ರ ಜನಗಣತಿಯ ಪ್ರಕಾರ 1578 ಜನಸಂಖ್ಯೆಯನ್ನು ಹೊಂದಿರುವ  ಈ ಗ್ರಾಮದಲ್ಲಿ 787 ಪುರುಷರು ಹಾಗೂ 791 ಮಹಿಳೆಯರಾಗಿದ್ದಾರೆ. 6 ವರ್ಷದೊಳಗಿನ ಮಕ್ಕಳ ಸಂಖ್ಯೆ 152ಇದ್ದು ಈ ಪೈಕಿ 83 ಗಂಡು 69 ಹೆಣ್ಣು ಮಕ್ಕಳವನ್ನು ಒಳಗೊಂಡಿದೆ. ಇಲ್ಲಿ ವಾಸಿಸುವ ಬಹುತೇಕ ಕುಟುಂಬಳು ವೈರಿಕ ಧರ್ಮವನ್ನು ಅನುಸರಿಸುತ್ತಾರೆ. ಇವರುಗಳು ಭಗವದ್ಗೀತೆಯ ಆರಾಧಕರಾಗಿರುವರು. ಈ ಗ್ರಾಮವು ತಾಲೂಕಿನ ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಸಹ ದೆ. ವಾಣಿಜ್ಯ ಬ್ಯಾಂಕುಗಳು, ಸರ್ಕಾರಿ ಕಛೇರಿಗಳು ಸಹ ಇಲ್ಲಿವೆ.
ದಕ್ಷಿಣ ಗಂಗೆ ಎಂದು ಪ್ರಸಿದ್ದಿಯನ್ನು ಪಡೇದಿರುವ ಕಾವೇರಿ ನದಿ. ಗಂಗಾ ನದಿಯಲ್ಲಿ ಸ್ನಾನಮಾಡಿ ಕಾಶಿ ರಾಮೇಶ್ವರನ ದರ್ಶನ ಪಡೆದರೆ ಪಾಪನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೆ ಉತ್ತರಭಾರತದ ಪ್ರವಾಸಿಗರಿಗೆ ಇದೆಯೋ ಹಾಗೆಯೇ ದಕ್ಷಿಣದ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೊ ಹಾಗೆ ಉತ್ತರಭಾರತದಲ್ಲಿ ದಕ್ಷಿಣದ ಕಾವೇರಿ ನದಿಯಲ್ಲಿ ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ದಕ್ಷಿಣ ಪ್ರವಾಸಿಗರಿಗೆ ಇದೆ. ಶ್ರೀ ಗಂಗಾದಿ ಸಮಸ್ತ ದೇವತೆಗಳು ವರ್ಷಕೊಮ್ಮೆ ತುಲಾಸಂಕ್ರಮಣದ ಮುಹೊರ್ತದಲ್ಲಿ ಕಾವೇರಿಯನ್ನು ಕೂರಿ ಒಂದು ತಿಂಗಳು ಅವಳೊಡನೆ ನೆಲೆಸಿರುತ್ತಾರೆ ಎಂದು ಸ್ಕಂದ ಪುರಾಣದಲ್ಲಿರುವ ಕಾವೇರಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಪ್ರಾಚೀನ ಋಷಿಗಳು ಸ್ಮರಿಸುತ್ತಾ ಬಂದ ಸಪ್ತನದಿಗಳಲ್ಲಿ ಶ್ರೀ ಕಾವೇರಿಯು ಸೇರಿದ್ದಾಳೆ. ಈ ಕ್ಷೇತ್ರದ ಕಾವೇರಿ ನದಿಯಲ್ಲಿ ಪವಿತ್ರ ವಹ್ನಿಪುಷ್ಕರಣಿ, ಗಾಯಿತ್ರಿ ಶಿಲೆ, ಗೋಗರ್ಭ, ಮೇನಕಾಶಿಲೆ, ಹನುಮಂತನ ಗೋವು, ಕಪಿಲಾತೀರ್ಥ, ಕುಮಾರಧಾರಾ ತೀರ್ಥಗಳು ಇಲ್ಲಿಗೆ ಬರುವ ಭಕ್ತರ ಪಾಲಿನ ಪವಿತ್ರ ಸ್ಥಳವಾಗಿವೆ.
ಇಲ್ಲಿಯ ಕಾವೇರಿ ನದಿಯಲ್ಲಿ ಗೌತಮಶಿಲೆ ಇತ್ತು. ಇದರ ಜೊತೆಗಿಲ್ಲಿ ಗೌತಮ ಮಹರ್ಷಿಗಳ ಪಾದದ ಗುರುತು ಸಹಾ ಇಲ್ಲಿ ಇತ್ತು. ಆದರೆ ಈಗ ಇಲ್ಲ, ಕ್ರಿ. 1935ರ ಡಿಸೆಂಬರ್ 9ರಂದು  ರಾಮನಾಥಪುರ ಮತ್ತು ಮಲ್ಲಿಪಟ್ಟಣ ನಡುವೆ ಸೇತುವೆಯನ್ನು ನಿರ್ಮಾಣವನ್ನು ಮಾಡಬೇಕಾದರೆ ಬ್ರೀಟಿಷ್ ಚಕ್ರವರ್ತಿ 5ನೆಯ ಜಾರ್ಜನ ಅಜ್ಞೆಯಂತೆ ಆ ಶಿಲೆಗೆ ಸಿಡಿಮದ್ದು ಸ್ಪೋಟಿಸಲಾಯಿತು ಆ ಸ್ಪೋಟಗೊಂಡಾಗ 3 ಭಾರಿ ರಾಮ-ಕೃಷ್ಣ-ಗೋವಿಂದ ದು ಧ್ವನಿ ಕೇಳಿತೆಂದು ಇಲ್ಲಿನ ಹಿರಿಯರು ಹೆಳುತ್ತರೆ.
ಕಾವೇರಿ ನದಿಯ ಮಧ್ಯದಲ್ಲಿರುವ ಲಿಂಗವನ್ನು ಆಗಸ್ತ್ಯೇಶ್ವರ ಲಿಂಗ ವೆಂದು ಹೆಸರು.ನದಿ ರೂಪದಲ್ಲಿ ಹರಿದು ಬರುತ್ತಿರುವ ಕಾವೇರಿಗೆ ಅಗಸ್ತ್ಯರು ತನ್ನ ಸತಿ ಮೇಲಿನ ವ್ಯಾಮೋಹದಿಂದ 12 ಯೋಜನೆಗಳಿಗೊಂದರಂತೆ ಶಿವಲಿಂಗವನ್ನು ಪ್ರತಿಷ್ಟಾಪಿಸಿದರು. ಅಗಸ್ತ್ಯರು ಪ್ರತಿಷ್ಠಾಪಿಸಿದ ಲಿಂಗಕ್ಕೆ ಅವರ ಹೆಸರೆ ಬಂದಿದೆ.
ಗುರುಸಾರ್ವಭೌಮರಾದ ಶ್ರೀ ವ್ಯಾಸರಾಜರು ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಗಸ್ತ್ಯೇಶ್ವರ ದೇಗುಲದ ಬಲಗಡೆ ಹನುಮಂತನನ್ನು ಪ್ರತಿಷ್ಠಾಪಿಸಿದರು. ಅದ್ದರಿಂದ  ವಿಗ್ರಹಕ್ಕೆ ಶ್ರೀ ವ್ಯಾಸಾಂಜನೇಯ ಎಂದು ಹೆಸರು ಬಂದಿದೆ.
ಇನ್ನು ಕಾವೇರಿ ನದಿ ನಡುವೆ ಇರುವ ಗೋಗಲ್ಲು (ಗೋಗರ್ಭ)ಕ್ಕೆ ಒಂದು ಐತಿಹ್ಯವಿದೆ. ಇದ್ಕಕೆವೃತಸಂಜೀವಿನಿಎಂದು ಕರೆಯುತ್ತರೆ. ದೇವ-ದಾನವರ ಯುದ್ಧದಲ್ಲಿ ವಿಷ್ಣುವಿನಿಂದ ಅಮೃತ ಪಾನ ಮಾಡಿದ ದೇವತೆಗಳು ರಾಕ್ಷಸರನ್ನು ಸೋಲಿಸಿದರು. ಸೋತ ರಾಕ್ಷಸರು ತಮ್ಮ ಪೂಜ್ಯ ಗುರುಗಳಾದ ಶುಕ್ರಾಚಾರ್ಯರಲ್ಲಿಗೆ ಬಂದು ನಮ್ಮನು  ದೇವತೆಗಳಗಿಂದ ರಕ್ಷಿಸಬೇಕೆಂದು ಮೊರೆಯಿಟ್ಟಾಗ ಶುಕ್ರಾಚರ್ಯರು ನಿಮ್ಮ ಸುಖಕ್ಕಾಗಿ ಸತ್ತವರನ್ನು ಬದುಕಿಸುವಮೃತಸಂಜೀವಿನಿಎಂಬ ಮಂತ್ರವನ್ನು ಕಲಿಯಲು ರಾಮನಾಥಪುರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.
ಈ ವಿಷಯ ತಿಳಿದ ಇಂದ್ರ, ಈ ವಿದ್ಯೆ ದಕ್ಕಬಾರದೆಂದು ಅವರ ತಪಸ್ಸನ್ನು ಭಂಗ ಮಾಡಲು ಇಂದ್ರನು ದೇವಲೋಕದಿಂದ ಊರ್ವಶಿ, ರತಿ-ಮನ್ಮಥ, ಕಾಮಧೇನು, ವಸಂತಕರನ್ನು ಕಳುಹಿಸುತ್ತಾನೆ. ತಪೋಭಂಗ ಪಡಿಸಿ ಶುಕ್ರಾಚಾರ್ಯರ ಕೋಪಕ್ಕೆ ತುತ್ತಾಗಿ ಕಾಮಧೇನುವಿಗೆ ಶಿಲೆಯಾಗು ಎಂದು ಶಾಪಕೊಟ್ಟರು. ಆದ್ದರಿಂದ ಶಿಲೆಯಾದ ಕಾಮಧೇನುವನ್ನು ಗೋವುಗಲ್ಲು, ಗೋಗಲ್ಲು ಎಂದು ಕರೆಯುತ್ತಾರೆ. ಅನಂತರ ಊರ್ವಶಿಯ ಪ್ರಾರ್ಥನೆಗೆ ಕ್ಷಮಾಶೀಲರಾದ ಶುಕ್ರಾಚಾರ್ಯರು. ರಾವಣನನ್ನು ಕೊಂದ ರಾಮ ನಿನ್ನ ಸಮೀಪಕ್ಕೆ ಬಂದಾಗ ಶಾಪದಿಂದ ಮುಕ್ತಿ ಹೊಂದು ಎಂದು ಶಾಪ ವಿಮೋಚನೆಯನ್ನು ಹೇಳಿ ತೆರಳುತ್ತಾರೆ.
ವಸಿಷ್ಠರಿಂದ ಪ್ರೇರಿತನಾಗಿ ಬಂದಾ ಶ್ರೀರಾಮ ಶಿಲೆಯಾಗಿದ್ದ ಕಾಮಧೇನು ಮುಂಭಾಗದಿಂದ ನುಸುಳಿ ಹಿಂಭಾಗದಿಂದ ಬಂದ ಈ ಗೋಗರ್ಭದಲ್ಲಿ ರಾಮನ ಪರಿವಾರದವರೆಲ್ಲರು ನುಸುಳಿದರೆಂದು ಐತಿಹ್ಯ ತಿಳಿಸುತ್ತದೆ. ಈ ಗೋಗರ್ಭದಲ್ಲಿ ಜನರು ಇತ್ತಲಿಂದ ಅತ್ತ ನುಸುಳಿ ತಮ್ಮ ಪಾಪ ನಿವಾರಣೆ ಆಯಿತೆಂದು ಅಂದು ಕೊಳ್ಳುತ್ತಾರೆ. ಇದರ ಪಕ್ಕದಲ್ಲಿಯೇಯಮತೀರ್ಥವೂ ಇದೆ. ವರ್ಷಕ್ಕೊಂದು ಸಾರಿ ಇದಕ್ಕೆ ಬಾಳೆ ದಿಂಡನ್ನು ಬಿಡುತ್ತಾರೆ. ಅದು ಕತ್ತರಿಸಿ ಕತ್ತರಿಸಿ ಬಿಡುತ್ತದೆ. ಆದ್ದರಿಂದ ಇದನ್ನು ಕತ್ತರಿ ಗೋವುಗಲ್ ಎನ್ನುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
ರಾಮನಾಥಪುರದಲ್ಲಿ ಹಲವಾರು ದೇಗುಲಗಳಿದ್ದೂ ಹೆಚ್ಚು ಪ್ರಖ್ಯಾತಿಯನ್ನು ಪಡೆದ ದೇಗುಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಈ ದೇವಾಲಯನ್ನು ನಿರ್ಮಿಸಲು ಒಂದು ಐತಿಹ್ಯವಿದೆ.ಕುಕ್ಕೆ ಸುಬ್ರಹ್ಮಣ್ಯದ ಮಠದ ಗುರು ಪರಂಪರೆಯ 14ನೆಯ ಶ್ರೀ ಶ್ರೀ ವಿಭುದೇಶ ತೀರ್ಥ ಪಾದಂಗಳವರು ಯಾತ್ರಾರ್ಥವಾಗಿ ಹೊರಟು ಶ್ರೀ ಕ್ಷೇತ್ರ ರಾಮನಾಥಪುರಕ್ಕೆ ಬಂದು ಇಲ್ಲಿಯ ಸಂಕ್ರಾಂತಿ ಮಂಟದಲ್ಲಿ ಬಿಡಾರ ಹೊಡಿದರು. ಆಗ ಸ್ವಪ್ನದಲ್ಲಿ ಶ್ರೀ ಸುಬ್ರಹ್ಮಣ್ಯನು ಬಂದು ಇಲ್ಲಿಯವರೆವಿಗೂ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ ನಾನು ಇಲ್ಲಯೇ ನೆಲೆಸಲು ಅಪೇಕ್ಷಿಸುತ್ತೇನೆ. ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳಿಸುತ್ತೇನೆ ಅವನ ಜೊತೆಗೆ ಹೊಳನರಸೀಪುರದ ಪಾಳೇಗಾರ ನರಸಪ್ಪನಾಯಕನ ಸಹಾಯದಿಂದ ನನ್ನನ್ನು ಇಲ್ಲಿ ಪ್ರತಿಷ್ಠೆ ಮಾಡು ಎಂದು ಹೇಳಿದನೆಂದು ಹೇಳಿ  ಹೊಳೆನರಸೀಪುರ ಪಾಳೇಯಗಾರ ನರಸಪ್ಪನಾಯಕನಿಗೂ ಕಾಣಿಕೋಂಡು ರಾಮನಾಥಪುರದಲ್ಲಿ ಗುರುಗಳ ಚ್ಚೆಯಂತೆ ನಡೆದುಕೊಂಡರೆ ನಿನಗೆ ಸಂತಾನಪ್ರಾಪ್ತಿಯಾಗುವುದು ಎಂದು ಕಳುಹಿಸಿ ಶ್ರೀಗಳ ಮರ್ಗ ದರ್ಶಣದಲ್ಲಿ  ಶ್ರೀ ವಿಭುದೇಶ ತೀರ್ಥರು ಇಲ್ಲಿ ಸುಬ್ರಹ್ಮಣ್ಯನನ್ನು ಪ್ರತಿಷ್ಟಾಪಿಸಿದರು.
ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು ಸಾಕಷ್ಟು ದೊಡ್ಡದಾದ ದೇವಾಲಯವಾಗಿದೆ. ಅಂದಿನಿಂದಲೂ ಜಾತ್ರೆ ಉತ್ಸವಗಳು ಇಲ್ಲಿ ನಡೆಯುತ್ತಿವೆ. ಪಂಚಮಿಯಂದು ರತೋತ್ಸಮ ನಡೆಯುತ್ತದೆ.
ಶ್ರೀ ಪಟ್ಟಾಬಿರಾಮ ದೇವಾಲಯ
ಈ ದೇವಾಲಯ 15ನೆಯ ಶತಮಾನದಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವನ್ನು ಸೌಬರಿ ವಹರ್ಷಿಗಳು ಪ್ರತಿಷ್ಟಾಪಿಸಿದರು. ಶ್ರೀ  ಪಟ್ಟಾಭಿರಾಮನ  ಮೂರ್ತಿ ಅತಿ ಮನೋಹರವಾಗಿದ್ದು ಇದನ್ನು ಸೀತಾದೇವಿ, ಲಕ್ಷ್ಮಣ, ಭರತ, ಶತೃಘ್ನ ಮತ್ತು ಹನುಮಂತನು ಈ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಅರ್ಚಿಸಿದರು. ದೇವಾಲಯದಲ್ಲಿರುವ ಮೂಲ ಮೂರ್ತಿ ಶ್ರೀ ರಾಮ ಕುಳಿತಿದ್ದು ಸೀತಾದೇವೊಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಪ್ರತಿಮೆ ಇಲ್ಲದೆ. ಈ ದೇವಾಲಯದಲ್ಲಿ ರಾಮನವಮಿ ಉತ್ಸಮ, ಪವಿತ್ರೋತ್ಸವ ದು ವಿಶೇಷೋತ್ಸಗಳು ಪ್ರತಿವರ್ಷ ವೈಶಾಖ ಶುಕ್ಲಪಕ್ಷದಲ್ಲಿ ಈ ದೇವರ ತೇರು (ರಥೋತ್ಸವ) ಎಳೆಯಲ್ಪಡುತ್ತದೆ.
ರಾಮೇಶ್ವರ ದೇವಾಲಯ
ಹೊಯ್ಸಳರ ಅರಸ 3ನೆಯ ನರಸಿಂಹನ ಕಾಲ (1235-1292)ದಲ್ಲಿ ಸೋಮದಂಡನಾಯಕ ಶ್ರೀ ರಾಮೇಶ್ವರ ದೇವಾಲಯವನ್ನು ನಿರ್ಮಾಣಮಾಡಿದಈ ದೇವಾಲಯ ನಕ್ಷತ್ರಾಕಾರದ ಗರ್ಭಗುಡಿ, ಸುಕನಾಸಿ, ಕಲಾಕುಸುರಿಯ 9 ಅಂಕಣ ಹೊಂದಿರುವ ನವರಂಗದ ಮನೋಹರ ಸ್ತಂಭಗಳು, ಹೊಯ್ಸಳ ಶಿಖರದ ಮುಂದೆ ಅವರ ಲಾಂಛನವನ್ನು ನಿರ್ಮಿಸಿದ. ನಂತರ ವಿಜಯನಗರ ಅರಸರ ಕಾಲದಲ್ಲಿ ಪ್ರಥಮ ಗೋಪುರ ಮತ್ತು ಸುತ್ತಲೂ ಭದ್ರವಾದ ರಕ್ಷಣಾ ತಡೆಗೋಡೆ ಮಂಟಪಗಳನ್ನು ಕಟ್ಟಿಸಿದ ಎಂಬುದು ತಿಳಿಯುತ್ತದೆ. ಮತ್ತು ಸ್ಥಳೀಯ ಪಾಳೆಯಗಾರರ ಕಾಲಕ್ಕೆ ಅಭಿವೃದ್ಧಿಗೊಂಡಿತೆಂದು ಹೇಳಲಾಗಿದೆ.

ದೇವಾಲಯದ ಒಳ ಭಾಗದಲ್ಲಿ ಮೇಣುಗೋಪಾಲ, ಭೈರವ, ಕೇಶವ, ಸೂರ್ಯ, ಗಣಪತಿ, ಮಹಿಷಮರ್ಧಿನಿ ವಿಗ್ರಹಗಳಿದ್ದು. ದೇವಾಲಯದ ಗರ್ಭಗುಡಿಯ ದಕ್ಷಿಣಕ್ಕೆ ದಕ್ಷಿಣಾಮೂರ್ತಿ, ಉತ್ತರಕ್ಕೆ ಚಂಡಿಕೇಶ್ವರಮೂರ್ತಿ, ಈಶಾನ್ಯಕ್ಕೆ ಈಶ್ಯಾನೇಶ್ವರ ದೇವರ ಮಂಟಪಗಳಿವೆ.ವಿಜಯನಗರದ ಆಳರಸರ ಕಾಲದಲ್ಲಾದ ಪ್ರಾಂಗಣದ ಮಂಟಪ ವಿಶಾಲವಾಗಿದ್ದು. ಮಂಟಪದ ಪೌಳಿ ಅನೇಕ ಚಿತ್ರಕಲಾ ಕೌಶಲ್ಯದಿಂದ ಶಿಲ್ಪಭಿತ್ತಿ ರಂದ್ರಜಾಲವನ್ನು ನೆಯ್ದುಕೊಂಡಿದೆ.
ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ರಾಮನಾಥೇಶ್ವರದ ದೇವಸ್ಥಾನದ ಮೇಲ್ವಿಚಾರಣೆಗೆ ನೀಡಿದ ಭೂದಾನ ಕುರಿತು ಎರಡು ಶಿಲಾಶಾಸನಗಳಲ್ಲಿ ಉಲ್ಲೇಖವಿದೆ. ರಾಮೇಶ್ವರ ದೇವಲಯದ ಗರ್ಭಗೃಹದ ಹೊರಭಿತ್ತಿಯಲ್ಲಿ ದಕ್ಷಿಣಾಮೂರ್ತಿ ದೇವಸ್ಥಾನದ ಹಿಂದಿರುವ ನಾಲ್ಕು ಕಲ್ಲುಗಳ ಮೇಲಿನ (ಅಗೂ. 46) ಶಾಸನ ಹಲವು ವಿಧಗಳಿಂದ ಕುತೂಹಲಕಾರಿಯಾಗಿದೆ. ರಾಮೇಶ್ವರ ದೇವಾಲಯದೊಳಗೆ ದಕ್ಷಿಣಾಮೂರ್ತಿ ಗುಡಿದ ಹಿಂದೆ ಒಂದರ ಪಕ್ಕ ಇನ್ನೊಂದರಂತೆ ನಿಲ್ಲಿಸಿದ ನಾಲ್ಕು ಬೇರೆ ಬೇರೆ ಕಲ್ಲುಗಳ ಮೇಲೆ ಶಾಸವನ್ನು ಕಂಡರಿಸಿರುವುದು ಒಂದು ಅರಪರೂಪದ ನಿದರ್ಶನವಾಗಿದೆ. ಈ ಶಾಸನವು ಕ್ರಿ.1250ರ ಅಕ್ಟೋಬರ್ 27 ಮತ್ತು 1251ರ ಜೂನ್ 21ರ ವೆಂದು ಎರಡು ದಿನಗಳನ್ನು ಹೊಂದಿದೆ. ಮೊದಲನೆಯ ತೇದಿಯಂದು ನಡುವೆ ನಡೆದಂತಹ ಘಟನೆಯನ್ನು ಮುಂದಿನ 8 ತಿಂಗಳ ಅನಂತರ ಸೂಚಿಸುತ್ತದೆ. ಹಿರಿಯ ಸಂಧಿ ವಿಗ್ರಹಿಯಾದ ಹಾಗೂ ಕೊಂಗಮಂಡಲದ ಅಧ್ಯಕ್ಷನಾದ ಬೊಮ್ಮಣ್ಣದಣ್ಣಾಯಕರ ಕೈಕೆಳಗಿದ್ದ ವಾಮರಸನ ಮಗ ಕಲ್ಲಯ್ಯನೆಂಬಾತ ರಾಮನಾಥದೇವರ ಪೂಜೆಗಾಗಿ ಹೂದೋಟವೊಂದನ್ನು ಮಾಡಿಸಲು ದೇವಾಲಯದ ಸ್ಥಾನಿಕರಿಂದ 95 ಕಂಬ ಭೂಮಿಯನ್ನು ಕ್ರಯಕ್ಕೆ ಪಡೆದು ದಾನ ನೀಡಿದ. ಇದರಲ್ಲಿ ಮೂವತ್ತು ಕೊಳಗ ತೋಟಗನ ಜೀವಿತಕ್ಕೆ ಸಂದಿತು. ತೋಟಕ್ಕೆ ಮತ್ತು ತೋಟಿಗನ ಮನೆಗೆ ತೆರಿಗೆಯನ್ನು ಮಾನ್ಯಮಾಡಲಾಯಿತು. ಕೆಲವು ತಿಂಗಳುಗಳ ಅನಂತರ  ದತ್ತಿಯನ್ನು ಸ್ವಲ್ಪ ಮಾರ್ಪಡಿಸಲಾಯಿತಿ. ತೋಟಿಗನಿಗೆ ಕೊಟ್ಟಿದ್ದ 30 ಕೊಳಗ ಭೂಮಿಯನ್ನು ಈಗ ದೇವರಿಗೆ ಬಿಡಲಾಯಿತು. ಇದಕ್ಕೆ ಪ್ರತಿಯಾಗಿ, ಹೊಸದಾಗಿ 80 ಕಂಬ ಭೂಮಿಯನ್ನು ಸ್ಥಾನಿಕರಿಂದ ತತ್ಕಾಲೋಚಿತ ಕ್ರಯಕ್ಕೆ ಪಡೆದು ತೋಟಗನ ಜೀವಿತಕ್ಕಾಗಿ ನೀಡಲಾಯಿತು. ಅಲ್ಲದೆ, ಹದೋಟಕ್ಕೆ ನೀರುಣಿಸಲು ಬಳಸುವ ರಾಟಣಕ್ಕೆ ಹೂಡಿದ ಎತ್ತುಗಳ ಮೇವಿಗಾಗಿ ವರಗುಳಿಯ ವಾರ್ಷಿಕ ಸಿದ್ಧಾಯದಿಂದ 3 ಗದ್ಯಾಣಗಳನ್ನು ಮತ್ತು ನೆಲುವಾಗಿಲಿನ ವಾರ್ಷಿಕ ಆದಾಯದಿಂದ ಒಂದು ಗದ್ಯಾಣ ಮತ್ತು ಒಂದು ಹಣವನ್ನು ಕ್ರಮವಾಗಿ ಶ್ರೀಕರಣದ ನಾಕಣ್ಣ ವಿಜಯಣ್ಣನ ಅಳಿಯ ಸೋಮಣ್ಣ ಹಾಗೂ ಶ್ರೀ ಕರಣದ ಕಾವಣ್ಣನ ಮಗ ಮದುಕಯ್ಯ ಇವರುಗಳು ದಾನಕೊಟ್ಟರು.
ಈ ಶಾಸನವು ಹದಿನಾರು ಮೆಟ್ಟಿನ ಹಾಸಗಳೆಯ ಉದ್ದಳತೆಯ ಉಪಕರಣವನ್ನು ಉಲ್ಲೇಖಿಸುತ್ತದೆ. ಈ ಅಳತೆ ಕೋಲಿನಿಂದ ದಾನ ಭೂಮಿಯನ್ನು ಅಳೆಯಲಾಯಿತು. ಭೂಮಿಯ ಸೀಮಾವಿವರನ್ನು ತಿಳಿಸುವಾಗ ಅದು ಸಿದ್ಧನಾಥನ ದೇವಾಲಯವನ್ನು ಉಲ್ಲೇಖಿಸುತ್ತಈ ವ್ಯವಹಾರದ ಸಂಬಂಧದಲ್ಲಿ ದಾನಿಯು ಸ್ಥಾನಿಕರಿಂದ ಭೂಮಿಯನ್ನು ಯಥೋಚಿತ ಬೆಲೆಗೆ ಕೊಂಡುಕೊಳ್ಳಬೆಕಾಯಿತೆಂಬುದನ್ನು ಗಮನಿಸಿದರೆ. ಆ ಭೂಮಿಭಾಗಗಳು ಸ್ಥಾನಿಕರ ಖಾಸಗಿ ಆಸ್ತಿಯಾಗಿತ್ತೆಂದು ಸ್ಪಷ್ಟವಾಗಿ ವಿದಿತವಾಗುತ್ತದೆ.
 ಈ ದೇವಾಲಯದ ಬಳಪ್ರಾಕಾರದಲ್ಲಿ ರಂಗಮಂಟಪದ ಹೊರಭಿತ್ತಿಯ ಬಳಿ ದಕ್ಷಿಣದ ಕಡೆ ನೆಟ್ಟಿರು (ಅಗೂ 44) ಕ್ರಿ..1252ರ ಶಾಸನವು ಕೂಡ ಶ್ರೀರಂಗಪಟ್ಟಣದಿಂದ ಆಳುತ್ತಿದ್ದ ಚಂಗಾಳ್ವದೊರೆಗಳಾದ ಸೋಮದೇವ ಮತ್ತು ಬೊಪ್ಪದೇವರು ನೀಡಿದ್ದ ದಾನವನ್ನು ಕುರಿತು ಪ್ರಸ್ತಾಪಿಸುತ್ತದೆ. ಈ ಶಾಸನ ಕೂಡ ಹಾನಿಗೀಡಾಗಿರುವುದರಿಂದ ವಿವರಗಳು ನಷ್ಟವಾಗಿವೆ. ಆದರೆ ಕಾವೇರೀ ತೀರದಲ್ಲಿ ರಾಮದೇವರ ವಿಗ್ರಹದ ಪ್ರತಿಷ್ಠಾಪನೆಗೆ ಪ್ರಾಯಶಃ ಇವರಿಬ್ಬರೇ ಕಾರಣಕರ್ತರೆಂದು ಕಾಣುತ್ತದೆ. ಕ್ರಿ.1245-46ರಲ್ಲಿ ಅವರು ಮಾಡಿದ ದಾನವಾದರೋ ಮೂಲದತ್ತಿಯ ಪುನರೂರ್ಜಿತವಾಗಿತ್ತು. ಮತ್ತೆ ಈಗ ಇವರಿಬ್ಬರೂ ಅರಸ ಮತ್ತು ರಾಯಸ ಕೂಸುಗಳ ಜೊತೆಗೂಡಿ ಮಾವನೂರು ಗ್ರಾಮವನ್ನು ದಾವಿತ್ತರಲ್ಲದೆ ದೇವಾಲಯದ ಮುಂದೆ ನಂದಿಕಂಬವನ್ನು ಪ್ರತಿಷ್ಠೆ ಮಾಡಿಸಿದರು.
ದೇವಾಲಯದ ಉತ್ತರ ದಿಕ್ಕಿನ ಹೊರ ಭಾಗದ ಗೋಡೆ ಮೇಲೆ(ಅಗೂ 48) ಕ್ರಿ.. 1383ನೆಯ ಅಕ್ಟೋಬರ್ 26ರ ಶಾಸನ ವಿಜಯನಗರ ಅರಸ ಎರಡನೆಯ ಹರಿಹರನ ಸೇವಕ ಕರಿಯ ಮಾಯಣ್ಣನು ರಾಮನಾಥಪುರ ಗ್ರಾಮವನ್ನು ಶ್ರೀ ರಾಮನಾಥ ಮತ್ತು ಶ್ರೀ ಗೋಪಿನಾಥ ದೇವರ ಪೂಜೆಗಾಗಿ ದತ್ತಿಕೊಟ್ಟು ಅದರ ಸುಂಕಗಳಾದ ಆಡುದರೆ, ಮಗ್ಗದರೆ, ಆನದೆರೆ, ಕುಮ್ಮರ-ಗಾಣಿಗರ- ನಾಯಿಂದರ ದೆರೆ (ಸುಂಕ) ಸಲ್ಲುವಂತೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ . ಈ ದೇವಾಲಯದ ತಾಂಡವೇಶ್ವರ ಸ್ವಾಮಿಯವರ ಉತ್ಸವ ವಿಗ್ರಹವನ್ನು ಮೀರ ರಾಜೈಯ್ಯನವರ ಮಗ ನಂಜರಾಜೈಯ್ಯನವರು ದಾನವನ್ನು ಮಾಡಿರುವ ವಿಷಯವನ್ನು (ಅಗೂ 71) ಶಾಸನ ತಿಳಿಸುತ್ತದೆ.
ಗ್ರಾಮದ ಗೋಗರ್ಭದ ಸಮೀಪದ ಬಂಡೆಯ ಮೇಲೆ (ಅಗೂ72) ಶಾಸನವು ಕ್ರಿ..1607ರಲ್ಲಿ ರಾಮರಾಜ ತಿರುಮಲರಾಜನು ನಂಜರಾಯಪಟ್ಟಣದ ರುದ್ರಗಣನಿಗೆ ಸ್ಥಿರ ಶಾಸನವೊಂದನ್ನು ಕೊಡುವುದನ್ನು ಕಾಣುತ್ತೇವೆ. ಈ ದಾನಿಯನ್ನು ಕ್ರಮವಾಗಿ ಬೆಟ್ಟದಪುರ ಮತ್ತು ಕಿಲಗೆರೆಯ ಎರಡು ಶಾಸನಗಳಲ್ಲಿ ಕಾಣಿಸಿಕೊಳ್ಳುವ ಇದೇ ಹೆಸರಿನ ವ್ಯಕ್ತಿಯೆಂದು ಗುರುತಿಸಿದೆ.
ಈ ಗ್ರಾಮದಲ್ಲಿ ಆದಿಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರು ಮತ್ತು ವ್ಯಾಸರಾಜರು ರಾಮನಾಥಪುರಕ್ಕೆ ಭೇಟಿ ನೀಡಿದ್ದಕ್ಕೆ ಕುರುಹುಗಳಿವೆ. ಆದಿಶಂಕರಾಚಾರ್ಯರು ಶ್ರೀರಾಮೇಶ್ವರ ದೇವಾಲಯದಲ್ಲಿ. ಇಂದ್ರಾಕ್ಷಿ ಎದುರಿಗೆ ಗ್ರಹ ಪೀಡಾದಿಗಳಿಗೆ ಮಾರಕವಾದ ತಾಮ್ರದ ಶ್ರೀಚಕ್ರ ಸ್ಥಾಪನೆಯನ್ನು ಮಾಡಿದ್ದಾರೆ.
ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಪ್ರಸಿದ್ಧ ಪುಷ್ಕರಿಣಿಗಲ್ಲಿ ಒಂದು ವಹ್ನಿ ಪುಷ್ಕರಣಿಇದೆ. ಇನ್ನೂ ಎರಡು ಕೆ.ಆರ್. ನಗರದ ಬಳಿಯಲ್ಲಿಅರ್ಕಪುಪ್ಕರಣಿತಮಿಳುನಾಡಿನ ಶ್ರೀ ರಂಗದಲ್ಲಿಚಂದ್ರ ಪುಷ್ಕರಣಿಇದೆ. ಈ ಪುಷ್ಕರಣಿಯಲ್ಲಿರುವ ಮೀನುಗಳು ದೇವತೆಗಳ ಅವರಾರವೆಂಬ ನಂಬಿಕೆಯಿದ್ದು ಎಂತಹ ಭಯಂಕರವಾದ ಪ್ರವಾಹ ಬಂದರೂ ಈ ಮೀನಿಗಳು ಮಾತ್ರ ಅತ್ತಿತ್ತ ಚಲಿಸದೆ ಇಲ್ಲಿಯೆ ಇದೆಇಲ್ಲಗೆ ಬರುವ ಪ್ರವಾಸಿಗಾರು ಪುರಿ ಕಡ್ಲೆ ಕಾಯಿಯನ್ನು ಇಲ್ಲಿಯ ನೀರಿಗೆ ಎಸೆದರೆ ಬಾರಿ ಗಾತ್ರದ ಮೀನುಗಳು ಮೇಳಕ್ಕೆ ಬರುತ್ತವೆ. ಅವುಗಳನ್ನು ನೋಡಿ ಮಕ್ಕಳಿಗೆ ಆಗುವ ನಂದ ವರ್ಣನಾತೀತ. ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಕ್ಷೇತ್ರಕ್ಕೆ ಆಗಮಿಸಿದಾಗ ಮೀನಿಗೆ ಮುಗುತಿಯನ್ನು ಚುಚ್ಚಿದ್ದರೆಂದು ಹೇಳುತ್ತಾರೆ. ಈ ಪುಷ್ಕರಣಿಯ ಒಂದು ಕಿ.ಮೀ ಅಂತರದಲ್ಲಿ ಯಾವುದೆ ರೀತಿಯ ಮೀನುಗಳನ್ನು ಹಿಡಿಯಬಾರದೆಂದು ಸರ್ಕಾರ ನಿಷೇಧಿಸಿದೆ.
ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ
 ಈ ದೇವಾಲಯ ಚಿಕ್ಕದೇವರಾಜ ಒಡೆಯರ್ ಕಾಲದ್ದು ಎಂದು ಹೇಳಲಾಗಿದೆ. ಈ ಪ್ರತಿಮೆಯನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿಭುದೇಶ ತೀರ್ಥರು ಈ ಕ್ಷೇತ್ರಕ್ಕೆ ಬಂದು ಪೂರ್ವಾಭಿಮುಖವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿದ್ದಾರು ಎಂದು ಕೂಡ ಹೇಳವಾಗುತ್ತದೆ. ಇಲ್ಲಿನ ನರಸಿಂಹ ಮೂರ್ತಿಯ ಮೇಲೆ ಲಕ್ಷ್ಮಿಯು ಕುಳಿತಿರುವುದನ್ನು ನಾವು ನೋಡ ಬಹುದಾಗಿದೆ.

ಮಾರ್ಗಶಿರ ಶುದ್ಧ ಷಷ್ಠಿಯೆಂದು ನಡೆಯು ರಥೋತ್ಸವ ಮೈಸೂರು ಸೀಮೆಯ ಜಾತ್ರೆಯ (ದನಗಳ) ಪೈಕಿ ರಾಮನಾಥಪುರದ ಜಾತ್ರೆಯೇ (ರಥೋತ್ಸವ) ಪ್ರಥಮವಾಗಿದೆ. ರಥವನ್ನು ವಿವಿಧ ಅಲಂಕಾರಗಳಿಂದ ಮರ್ಣರಂಜಿತವಾಗಿ ಅಲಂಕರಿಸಿ ರಥದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ಪ್ರತಿಷ್ಠಪಿಸಿರುವ ರಥವನ್ನು ನೋಡಲು ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಂದು ಪೂಜಿಸುತ್ತರೆ. ಇಲ್ಲಿ ನಡೆಯುವ ದನಗಳ ಜಾತ್ರೆ ಸುಪ್ರಸಿದ್ಧವಾಗಿದ್ದ. ಇದು ರಥೋತ್ಸವ ನಡೆಯುವು ಮುಚ್ಚೆನೆ ಮುಗಿದು ಹೋಗಿರುತ್ತದೆ. ರಥೋತ್ಸವ ಜರುಗಿದ ದಿನದಿಂದ ಹಿಡಿದು ಒಂದು ತಿಂಗಳವರೆಗೂ ಜಾತ್ರೆ ನಡೆಯುತ್ತದೆ. ತಿಂಗಳ ನಂತರತಿಂಗಳಶ್ರಷ್ಟಿತೇರು ಹರಿಯುತ್ತದೆ.ಏಪ್ರಿಲ್ ಮೇ ತಿಂಗಳ ವೈಶಾಖಮಾಸದಲ್ಲಿ ಇಂದ್ರಾಕ್ಷಮ ವಿಗ್ರಹದ ರಥೋತ್ಸವ ಇರುತ್ತದೆ. ಈ ಕ್ಷೇತ್ರದಲ್ಲಿ ಮಾಘ ಬಹುಳ ಮಹಾಶಿವರಾತ್ರಿ ಮರುದಿನ ಅಗಸ್ತ್ಯೇಶ್ವರ, ವೈಶಾಖ ಶುದ್ಧ ಮೃಗಶಿರ ನಕ್ಷತ್ರದಲ್ಲಿ ಪಟ್ಟಾಭಿರಾಮ ಮತ್ತು ವೈಶಾಖ ಶುದ್ಧ ಚತುರ್ದಶಿ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

Thursday, May 29, 2014

ಭಾಷಾ ಚಮತ್ಕಾರದ ಜಾನಪದ ಜಗತ್ತು


ಜನಪದ ಮತ್ತು ಜಾನಪದ ಈ ಎರಡರಲ್ಲಿ ಯಾವುದು ಸರಿಯಾದುದು?
ಈ ಪ್ರಶ್ನೇಗೆ ಉತ್ತರ ಈ ಎರಡು ಪದಗಳೂ ಸರಿಯಾದುವೇ.
ಕುಮಾರವ್ಯಾಸ ಭಾರತದಲ್ಲಿ ಪಾಂಡವರನ್ನು ಕುರಿತು 'ಜನಪದಗಳನ್ನು ದಾಟಿದರು' ಎಂಬ ಉಲ್ಲೇಖವಿದೆ ಇಲ್ಲಿ ಜನಪದಗಳನ್ನು ದಾಟಿದರು ಎಂದರೆ ಗ್ರಾಮಗಳನ್ನು, ಹಳ್ಳಿಗಳನ್ನು ದಾಟಿದರು ಎಂದು ಸ್ಥೂಲ ಸರಳಾರ್ಥದಲ್ಲಿ ಜನಪದ ಎಂದರೆ ಹಳ್ಳಿ ಎಂದರ್ಥ. 'ವಾಲ್ಮೀಕಿ ರಾಮಾಯಣ'ದಲ್ಲಿ ದಶರಥನ್ನು ಕುರಿತು 'ಪೌರ ಜಾನಪದ ಪ್ರಿಯಃ' ಎಂಬ ವರ್ಣನೆಯಿದೆ ಅಂದರೆ ಪುರಜನರಿಗೂ, ಹಳ್ಳಿಯವರಿಗೂ ಪ್ರಿಯನಾದವನು ಎಂದು ಜಾನಪದ ಎಂದರೆ ಇಲ್ಲಿ ಹಳ್ಳಿಯವನು ಎಂದರ್ಥ. ಜನಪದ-ಹಳ್ಳಿ; ಜಾನಪದ-ಹಳ್ಳಿಯವನು.
          ಕಾಳಿದಾಸ 'ಮೇಘ ಸಂದೇಶ'ದಲ್ಲೂ 'ಜಾನಪದ' ಶಬ್ದ ಪ್ರಯೋಗವಿದೆ.
          ಜನಪದರ ವಿಶಿಷ್ಟ ಪ್ರಕಾರಗಳಲ್ಲಿ ಒಂದಾದ 'ಜಾನಪದ ಗಣಿತ' ಒಂದು ಭಾಷೆಯ ಚಾತುರ್ಯವುಳ್ಳ ಚಾಮತ್ಕಾರಗಳ ಪ್ರಕಾರವಾಗಿದೆ. ಶಿಷ್ಠ ಸಾಹಿತ್ಯದಲ್ಲಿರುವ ಇಂದಿನ ಗಣಿತ ಜನಪದರ ಬಾಯಲ್ಲೇ ಹುದುಗಿಕೊಂಡಿದ್ದ ಹಳ್ಳಿಗರ ಅಂಕಗಣಿತ ನಮಗೆ ತುಂಬಾ ಮೆಚ್ಚಿಗೆಯದ್ದಾಗಿ ಕಂಗೊಳಿಸುತ್ತದೆ ಎಂಬುದನ್ನಲ್ಲಿ ಮರೆಯಬಾರದು.
ಅಂಕಗಣಿತದ ಹಲವು ಮಾದರಿಗಳನ್ನು ಜನಪದರು ಬರಿ ಬಾಯಲ್ಲೆ ವ್ಯವಹಾರ ವಿನೋದ, ಮನರಂಜನೆಗಳಿಗಾಗಿ ಬಳಸಿಕೊಳ್ಳುತ್ತಿದ್ದರಲ್ಲದೆ ಪ್ರತಿಯೊಂದು ಲೆಕ್ಕಗಳಲ್ಲೂ ಬುದ್ದಿವಂತಿಕೆ, ಜ್ಞಾನ ಚಾತುರ್ಯಗಳನ್ನು ತೋರಿಸಿರುವುದು ಕಂಡು ಬರುತ್ತದೆ.
ಈ ಒಂದು ಗಣಿತ ಬಗಟೂ ಹೌದು, ಜಾಣ್ಮೆಯನ್ನು ಹಾಗೂ ಸ್ಮರಣ ಶಕ್ತಿಯನ್ನು ಹರಿತಗೊಳಿಸುವ ಮಸೆಗಲ್ಲೂ ಹೌದು. ಬರೆಯುವ ಸಾಧನವೇನೊ ಇಲ್ಲದೆ ಬಾರಿ ಬಾಯಲ್ಲೇ ನೆನಪಿಟ್ಟು ಲೆಕ್ಕವನ್ನು ಮಾಡುವ ಚಮತ್ಕಾರವನ್ನು ಜನಪದರು ಮೈಗೂಡಿಸಿ ಕೊಂಡಿದ್ದಾರೆ.
ಇಂತಹ ಪ್ರಕಾರವನ್ನು ದ್ಯಾವನೂರು ಗ್ರಾಮವನ್ನು ಕ್ಷೇತ್ರಕಾರ್ಯವನ್ನು ಮಾಡುವಾಗ ಕೇಲವು ಜನಪದ ಗಣಿತಗಳನ್ನು ನಾನು ಪತ್ತೆಮಾಡಿದ್ದೇನೆ.
ಒಡ್ಡಿ ಮೂಗಾಳು ಬದ್ರತ್ರುಕ್ಕ್ಹೋಗಿ ವಾಪಾಸ್ ಬಂದೋದೆಷ್ಟು ಜನ?
ಇದಕ್ಕೆ ಸರಿಯಾದ ಉತ್ತರ ಐದು.
ಇಲ್ಲಿ ಒಟ್ಟಿ ಅಂದರೆ ನಾಲ್ಕು ಜನ, ಮೂಗಾಳು ಎಂದರು ಮೂರು ಆಳುಗಳಲ್ಲ ಒಬ್ಬ ಮೂಗ(ಕ)ಎಂದರ್ಥ ಇಲ್ಲಿ 4+1=5 (ಒಡ್ಡಿ + ಮೂಗ = ಐದು) ಜನ ಇದ್ದಾರೆ. ಇವರೆಲ್ಲಾ ಬಡ್ಡರ ಹತ್ತಿರ ಹೋಗಿ ಅಷ್ಟೊ ಜನರು ವಾಪಾಸ್ಸು ಬಂದರು ಅಷ್ಟೆ.
ಇನ್ನೋಂದು
3 ಆಗಸೆ ಬಾಗಿಲು
3 ಆಗಸೆ ಬಾಗಲಾಗು ಓಸು ದನಗಳು ಸಮನಾಗಿ ಹೋಗಬೇಕು.
ಅಲ್ಲಿ 5 ಓಣಿ ಬರ್ತಾವೆ
5 ಓಣಿಗೂ ದನಗಳು ಸಮನಾಗಿ ಹೋಗಬೇಕು
ಆ ಮ್ಯಾಲೆ 7 ಗುಡ್ಡ ಬರ್ತಾವೆ
7 ಗುಡ್ಡದಾಗೂ ದನಗಳು ಸಮನಾಗಿ ಹೋಗಬೇಕು
ನಂತರ 9 ಕೆರೆ ಸಿಗ್ತಾವೆ.
9 ಕೆರೆಯಾಗೂ ನರು ಕುಡಿದು ಸಮವಾಗಿ ಹೋಗಬೇಕು.
ಕೋನೆಗೆ 11 ಮರ ಇರ್ತಾವೆ
ಇಲ್ಲಿನ 11 ಮರತ್ತಾಕ್ಕೂ ದನಗಳು ಸಮನಾಗಿ ಮಲಗಬೇಕು
ಹಾಗಾದ್ರೆ ದನಗಳು ಏಸು ಇದ್ವು?
ಮೊದ್ಲಿಂದ ಕೊನೆವರ್ಗೂ ಎಷ್ಟು ದನಗಳಂತೆ ಹೋಗ್ತಾವೆ?
ಹೀಗೆ ಇಲ್ಲಿಯ ಒಂದೊಂದು ಲೆಕ್ಕ ಚಮತ್ಕಾರಗಳಲ್ಲಿ ಜಾನಪದರ ಜಾಣ್ಮೆ, ಕೌಶಲ್ಯ, ಚಾತುರ್ಯ ಇತ್ಯಾದಿಗಳು ನಮ್ಮನ್ನು ಬೆರಳು ಕಚ್ಚುವಂತೆ ಮಾಡುತ್ತಾವೆ. ಮೇಲಿನ ಬಗಟು ಪ್ರಶ್ನೆಗೆ ಸರಿಯಾದ ಉತ್ತರ.
3 ಆಗಸೆ ಬಾಗಿಲಿಗೆ 3465ರಂತೆ ಹೋದ್ವು (3465 X 3 = 10395)
5 ಓಣೀಲಿ 2079ರಂತೆ ಹೋದ್ವು (2079 X 5 = 10395)
7 ಗುಡ್ಡದಾಗೆ 1485ರಂತೆ ಹೋದ್ವು (1485 X 7 = 10395)
9 ಕೆರೆಯಾಗೆ 1155ರಂತೆ ಹೋದ್ವು (1155 X 9 = 10395)
11 ಮರತ್ತಾಕ್ಕೂ 945ರಂತೆ ಮಲಗಿದ್ವು (945 X 11 = 10395)
ಅಲ್ಲಿಗೆ ಒಟ್ಟು 10395 ದನಗಳು ಇದ್ವು.
ಜನಪದರ ಈ ಜಾಣ್ಮೆ ನಿಜಕ್ಕೂ ಅಮೋಘವಾದದ್ದಾಗಿದೆ.
ಒಂದು ಚಲೊ ಹಣ್ಣು
ಒಂದು ಹಣ್ಣಿಗೆ 12 ತೊಳೆ
1 ತೊಳೆಗೆ 30 ಬೀಜ
ಅದ್ರಾಗೆ ಅರ್ಧ ಕರೇವು, ಅರ್ಧ ಬಿಳೇವು
ಹಾಗಾದ್ರೆ ಇವು ಯಾವುವು?
ಇದರಲ್ಲಿ ಜಾನಪದರು ಕಾಲಮಾನವನ್ನು ಹೇಗೆ ಜ್ಞಾಪಕದಲ್ಲಿರಿಸಿಕೋಳ್ಳುತ್ತಿದ್ದರು ಎನ್ನುವುದನ್ನು ತಿಳಿಸುತ್ತದೆ.
ಒಂದು ಚಲೋ ಹಣ್ಣು ಅಂದ್ರೆ - ಒಂದು ಸಂವತ್ಸರ
ಒಂದು ಸಂವತ್ಸರಕ್ಕೆ - ಹನ್ನೆರಡು ತಿಂಗಳು (ತೊಳೆಗಳು)
ಒಂದು ತಿಂಗಳಿಗೆ - ಮುವ್ವತ್ತು ದಿನಗಳು ( ಬೀಜಗಳು)
ಅರ್ಧ ಕರೇವು ಅಂದ್ರೆ - ಅಮಾವಸೆಯ 15 ದಿನಗಳು
ಅರ್ಧ ಬಿಳೇವು ಅಂದ್ರೆ - ಹುಣ್ಣಿಮೆಯ 15 ದಿನಗಳ.
ಮತ್ತೊಂದು
 ಬೆಳಗ್ಗೆ ನಾಲ್ಕು ಕಾಲು
ಮಧ್ಯಾಹ್ನ ಎರಡು ಕಾಲು
ರಾತ್ರಿಗೆ ಮೂರು ಕಾಲು
ಹಾಗಾದ್ರೆ ಇದು ಯಾವ ಪ್ರಾಣಿ?
ಇಲ್ಲಿಯ ಒಗಟು ಮಾನವನ ಬೆಳವಣಿಗೆಯ ಹಂತಗಳನ್ನು ತಿಳಿಸುತ್ತಾದೆ. ಇದಕ್ಕೆ ಸರಿಯಾದ ಉತ್ತರ ಮನುಷ್ಯ ಪ್ರಾಣಿಯಾಗಿದೆ. ಹೇಗೆಂದರೆ.
ಹುಟ್ಟಿದಾಗ ಅಂಬೆಗಾಲು ಅಂದರೆ ನಾಲ್ಕು ಕಾಲು ಓಡಾಡಂಗೆ ಆದಾಗ ಎರಡು ಕಾಲು ವಯಸ್ಸಾಗಿ ಮುದುಕರಾದಾಗ ಕೋಲು ಹಿಡಕೊಂಡು ನಡೆದೆ ಮೂರು ಕಾಲು.
          ನಾಲ್ಕುವರೆ ಅರ್ಥದ ಎರಡರಷ್ಟು ಅಂದ್ರೆ ಎಷ್ಟು?
ಈ ಒಂದು ಪ್ರಶ್ನೆ ಕೇಳುವಂತಹವರ ಮೇಗವೇ ಒಂದು ಚಿಂತನೆಗೆಡವು ಮಾಡಿಕೋಡುತ್ತಾದೆ. ಇಲ್ಲಿ ನಾಲ್ಕುವರೆಯ ಅರ್ಥ ಎರಡುಕಾಲು ಇದರ ಎರಡರಷ್ಟು ಅಂದರೇ ನಾಲ್ಕುವರೆನೇ (41/2 / 2ಘಿ2)
 1 ಎಮ್ಮೆಗೆ 3 ಸೇರು ಹಾಲು
1 ಆಕಳಿಗೆ 11/2 ಸೇರು ಹಾಲು
1 ಆಡಿಗೆ 1/4 ಸೇರು ಹಾಲು
20 ಪ್ರಾಣಿಗೆ 20 ಸೇರು ಹಾಲು ಆಗಬೇಕು
ಹೇಗೆ ಸಮ ಮಾಡಬಾವುದು ಹೇಳು?
ಇದಕ್ಕೆ ನಮ್ಮ ಜಾನಪದರು ಕೋಡುವತಂಹ ಉತ್ತರ ಹೀಗೆ.
5 ಎಮ್ಮೆಗೆ 15 ಸೇರು ಹಾಲು
1 ಆಕಳುಗೆ 11/2 ಸೇರು ಹಾಲು
14 ಆಡಿಗೆ 31/2 ಸೇರು ಹಾಲು
ಅಲ್ಲಿಗೆ 20 ಪ್ರಾಣಿ 20 ಸೇರು ಹಾಲು.
ಒಂಬತ್ತು ಗೂಟ ತೊಂಬತ್ತು ಕುದುರೆ. 'ಒಂದ್ ಗೂಟಕ್ಕೆ ಕಟ್ಟೆದ್ರೆ ಮತ್ತೊಂದ್ ಗೂಟಕ್ಕೆ ಕಟ್ಟಬಾರದು' ಹ್ಯಾಗೆ ಕಟ್ತಿ? ಅಂದ್ರೆ ಬರೆ ಬೆಸ ಸಂಖ್ಯಾಗೆ ನಮ್ಮ ದ್ಯಾವನೂರು ಕೆರೆಲೇ ಕಟ್ಟಬೇಕು ಸರಿಯಾಗೆ ಕಟ್ರೆ ನನ್ನ ಒಂದು ಕುರಿ ನನಗೆ? ಎಂದು ಪಂದ್ಯವನ್ನು ಕಟ್ಟುತ್ತಾರೆ.
ಇಲ್ಲಿ 'ಒಂದು ಗೂಟಕ್ಕೆ ಕಟ್ಟಿದ್ರೆ ಮತ್ತೊಂದ್ ಗೂಟಕ್ಕೆ ಕಟ್ಟಬರದು' ಅಂದಾಗ 'ಮತ್ತೊಂದ್' ಎನ್ನುವ ಪದ 9 ಗೂಟದಲ್ಲಿ ಒಂದು ಗೂಟಕ್ಕೆ ಕಟ್ಟಬರದು ಎಂಬ ಅರ್ಧವನ್ನು ಕೊಡುತ್ತದೆ. ಆದ್ದರಿಂದ ಉಳಿದ 8 ಗೂಟಗಳಿಗೆ ಕುದುರೆಗಳನ್ನು ಹೀಗೆ ಬೆಸಸಂಖ್ಯೆಯಲ್ಲಿ ಕಟ್ಟಬಹುದು.
1ನೆಯ ಗೂಟಕ್ಕೆ 1 ಕುದುರೆ
2ನೆಯ ಗೂಟಕ್ಕೆ 3 ಕುದುರೆ
3ನೆಯ ಗೂಟಕ್ಕೆ 5 ಕುದುರೆ
4ನೆಯ ಗೂಟಕ್ಕೆ 7 ಕುದುರೆ
5ನೆಯ ಗೂಟಕ್ಕೆ 9 ಕುದುರೆ
6ನೆಯ ಗೂಟಕ್ಕೆ 11 ಕುದುರೆ
7ನೆಯ ಗೂಟಕ್ಕೆ 13 ಕುದುರೆ
8ನೆಯ ಗೂಟಕ್ಕೆ 41 ಕುದುರೆ
9ನೆಯ ಗೂಟಕ್ಕೆ ಖಾಲಿ
ಒಟ್ಟು = 90 ಕುದುರೆ
      ಹೀಗೆ ನಮ್ಮ ಜಾನಪದರು ಅಂಕಿಯಲ್ಲಿ ಸರಸವನ್ನು ಆಡುತ್ತಾರೆ. ಜೋತೆಗೆ ಕುಡುವುದು, ಕಳೇಯುವುದು ಬಾಗಿಸುವುದು ಹಾಗೂ ಗುಣಿಸುವುದು ಕಳಿಯುತ್ತರೆ. ಈ ರೀತಿಯ ಒಗಟಿನ ಆಟವನ್ನು ಆಡುತ್ತಿದ್ದರು ಇದರಿಂದ ಓದು ಬರಹ ತಿಳಿಯದವರ ಅಂಕಗಣಿತದ ಪರಿಚಯವನ್ನು ಹೊಂದಿದ್ದಾರು ಎಂದು ತಿಳಿಯುತ್ತಾರೆ. ಜೋತೆಗೆ ಅಂಕಗಣಿತದ ಹುಟ್ಟಿಣ ಮೂಲ ಸಹ ತಿಳಿಯುತ್ತದೆ.


ಜನಪದದ ಸೋಗಿನಲ್ಲಿ ಅನೇಕ ಕ್ಷೇತ್ರಗಳು ಮರೆಯಾಗುತ್ತಿವೆ. ಅಂತಹದರಲ್ಲಿ ಒಂದು ಈ ಗಣಿತ ಚಮತ್ಕಾರಗಳು. ಇವುಗಳು ಗಾತ್ರದಲ್ಲಿ ಕಿರಿದಾದರೂ ಇದು ಸತ್ವದಲ್ಲಿ ಹಿರಿದಾಗಿದ್ದು ಜೋತೆಗೆ ಜಾನಪದರ ಈ ಜಾಣ್ಮೆ ನಜಕ್ಕೂ ಅಮೋಘವಾದದ್ದು ಇವರ ಭಾಷೆಗೆ ಸಂಬಂಧಿಸಿದ ಅಕ್ಷರ, ಪದ, ಉಕ್ತಿ ಚಮತ್ಕಾರಗಳಲ್ಲೂ ಇವರದು ಎತ್ತಿದ ಕೈ. ಜನಪದರು ತಮ್ಮ ದಿನನತ್ಯದ ಬದುಕಿನಿಂದ ಹಾಗೂ ಮಹಾಭಾರತದ ರಾಮಾಯಣ, ಭಾಗವತ ಮತ್ತು ಪುರಾಣ ಮೊದಲಾದವುಗಳ ಜ್ಞಾನ ಸಂಪತ್ತಿನಿಂದ ಆಯ್ದುಕೊಂಡು ಶಬ್ದ ಅರ್ಥ ಧ್ವನಿಗಳ ಮೂಲಕ ಭಾಷಾ ಚಮತ್ಕಾರಗಳನ್ನು ನಿರೂಪಣೆಗೈದಿದ್ದಾರೆ.

Wednesday, May 28, 2014

ದೇವಿಗೆರೆ


      ಶಿಲ್ಪಕಲೆಯ ಸಾಮ್ರಾಜ್ಯವನ್ನೇ ತನ್ನ ಮಡಿಲಿನಲ್ಲಿರಿಸಿಕೊಂಡು ಪ್ರಜ್ವಲಿಸುತ್ತಿರುವ ಜಿಲ್ಲೆ ಹಾಸನ. ನಗರದ ಹಳೇ ಬಸ್ ನಿಲ್ದಾಣದ ಬಳಿ ಇರುವ ಕಟ್ಟಿನಕೆರೆ ಮಾರುಕಟ್ಟೆಯ ಪಕ್ಕದಲ್ಲಿ ಇರುವ ಕೆರೆಯನ್ನು ದೇವಿಗೆರೆ' ಎಂದು ಕರೆಯಲು ಇಲ್ಲಿನ ಸ್ಥಳ ಪುರಾಣವೆ ಕಾರಣವಾಗಿದೆ.
ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ಈ ಸಪ್ತಮಾತೃಕೆಯರು ವಾರಣಾಸಿ(ಕಾಶಿ)ಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕೆಂದು ಬಂದಾಗ ಇಲ್ಲಿನ ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ ಕಂಡು ಮನ ಸೋತಿ ಇಲ್ಲಿಯೇ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವೈಷ್ಣವಿ, ಕುಮಾರಿ ಮತ್ತು ಮಹೇಶ್ವರಿ ಹಾಸನದ ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆ. ಬ್ರಾಹ್ಮೀ ದೇವಿ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಯೂರಿದಳು. ಇನ್ನುಳಿದ ದೇವತೆಗಳಾದ ಚಾಮುಂಡಿ, ವರಾಹಿ ಮತ್ತು ಇಂದ್ರಾಣಿ ದೇವಿಗೆರೆಯ ಮಧ್ಯಭಾಗದಲ್ಲಿ ನೆಲೆಸಿದರು ಎಂಬ ಐತಿಹ್ಯವಿದೆ. ಈಗಲೂ ಈ ಕೆರೆಯೊಳಗೆ ಮೂರು ದೇವಾಲಯಗಳಿವೆ ಎಂಬ ಪ್ರತೀತಿಯಿದೆ. ದೇವತೆಗಳ ನೆಲೆವೀಡಾದ್ದರಿಂದ ಹಾಗೂ ಸಪ್ತಮಾತೃಕೆಯರು ಇಲ್ಲಿ ಜಲ ಕ್ರೀಡೆಯಾಡಲು ಬರುತ್ತಿದ್ದುದರಿಂದ ಈ ಕೆರೆಯನ್ನು ದೇವಿಯರ ಕೆರೆ, ದೇವಿಕೆರೆ ಎಂದು ಕರೆಯುತ್ತಿದ್ದು. ಈಗ ಆಡು ಮಾತಿನಲ್ಲಿ ದೇವಿಗೆರೆ ಎಂದಾಗಿದೆ. ಇದಕ್ಕೆ ಸಪ್ತಮಾತೃಕೆಯರ ಕಲ್ಯಾಣಿ ಎಂದು ಸಹ ಹೆಸರಿದೆ.
ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿರುವ ಶಾಸನದ ಪ್ರಕಾರ ದೇವಿಗೆರೆಗೆ ಹಿಂದೆ ದೇವರಕೆರೆ ಎಂದು ಹೆಸರಿತ್ತು. ಕೆರೆಯ ಮುಂದೆ ಪುರುಷ ದೇವರುಗಳ ಮೂರ್ತಿಳೆ ಇರುವುದರಿಂದ ದೇವರಕೆರೆ ಎನ್ನಲಾಗಿದ್ದು, ಹಾಸನದ ಗ್ರಾಮ ದೇವತೆ ಹಾಸನಾಂಬೆ ಪ್ರಚಾರಕ್ಕೆ ಬಂದಂತೆ ದೇವರಕೆರೆ ಎನ್ನುವುದು ದೇವಿಕೆರೆ ಈಗ ದೇವಿಗೆರೆ ಎಂದಾಗಿದೆ ಎಂಬ ಸತ್ಯ ತಿಳಿಯಿತ್ತದೆ.
ಸುಮಾರು 13ನೆಯ ಶತಮಾನದಲ್ಲಿ ಹೊಯ್ಸಳರ ಅರಸ ಎರಡನೆಯ ನರಸಿಂಹ ಈ ಕೆರೆಯನ್ನು ನಿರ್ಮಾಣ ಮಾಡಿದ್ದಾಗಿ ಶಾಸನದಿಂದ ತಿಳಿದುಬರುತ್ತದೆ. ಕೆರೆಯ ದಡದಲ್ಲಿ ಗಣಪತಿ, ಗಂಗಾಧರೇಶ್ವರ, ಚಿದಂಬರೇಶ್ವರ, ಅಶ್ವತ್ಥಕಟ್ಟೆ, ಕೊಳಲು ಗೋಪಾಲಸ್ವಾಮಿಯ ದೇವಾಲಯಗಳೂ ಆ ಕಾಲದಲ್ಲೇ ನಿರ್ಮಾವಾಗಿದೆ. ಊರಿನ ಹೆಬ್ಬಾಗಿಲಿನಲ್ಲಿ ಈ ದೇವಾಲಯವಿದೆ, ಕಾಲ ಕ್ರಮೇಣ ನಗರ ಬೆಳೆದಂತೆ ಈ ಜಾಗ ಹಾಸನದ ಹೃದಯ ಭಾಗವಾಯಿತು.
ದೇವಿಗೆರೆಯನ್ನು ನಿರ್ಮಿಸುವ ಮೊದಲು ಯಾವುದೇ ಲೋಪಗಳಾಗದಂತೆ ಇಲ್ಲಿ ಚಿಕ್ಕಗಣಪತಿಯನ್ನು ಪ್ರತಿಷ್ಠಾಪನೆಯಾಯಿತು. ಹಾಗೂ ಇಲ್ಲಿರುವ ಕೊಳಲು ಗೋಪಾಲಸ್ವಾಮಿ ದೇವಾಲಯದಲ್ಲಿರುವ ಮೂಲ ವಿಗ್ರಹ ಅದ್ಭುತ ಶಿಲ್ಪ ಕಲೆಯಿಂದ ಕೂಡಿದೆ.
ಶ್ರೀ ಕೃಷ್ಣನು ಕೋಳಲು ನುಡಿಸುವ ರೀತಿಯಲ್ಲಿರುವ ಈ ಶಿಲ್ಪ ಐದು ಅಡಿ ಎತ್ತರವಿದೆ. ಅಕ್ಕ ಪಕ್ಕದಲ್ಲಿ ಶ್ರೀದೇವಿ ಹಾಗೂ ಭೂದೇವಿಯರ ವಿಗ್ರಹವಿದೆ ಜೋತೆಗೆ ವಿಷ್ಣವಿನ ದಶ ಅವತಾರಗಳನ್ನು ಇಲ್ಲಿ ಕೆತ್ತಲಾಗಿದೆ. ಕೃಷ್ಣನ ಮೇಲೆ ಮಂದಾರ ವೃಕ್ಷವಿದ್ದು ಜೋತೆಗೆ ಋಷಿ ಮುನಿಗಳು, ಗೋಪಿಕಾ ಸ್ತ್ರೀಯರು ಹಸು ಕರುಗಳು, ಗೊಲ್ಲರು ಕೃಣ್ಣನ ಹಿಂದೆ ಆದಿಶೇಷ ಸಹ ಇದೆ. ಶ್ರೀ ಕೃಷ್ಣನ ಕೂದಲನ್ನು ತುರುಬಿನಿಂದ ಕಟ್ಟಿರುವ ದೃಶ್ಯ ಸಹ ನಾವು ನೋಡಬಹುದಾಗಿದೆ. ಈ ದೇವಾಲಯದ ಗರ್ಭಗುಡಿ ಸೂರ್ಯನ ನವರಂಗವನ್ನು ಹೊಂದಿದ್ದು ದೇವಾಲಯದ ಹೊರಗೆ ಎರಡು ಆನೆಗಳ ಪ್ರತಿಮೆ ಇದೆ. ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ನೆರವೇರುತ್ತದೆ.
ಗಂಗಾಧರೇಶ್ವರ ದೇವಾಲಯದ ಮೂಲ ವಿಗ್ರಹ ಶಿವಲಿಂಗದ ರೂಪದಲ್ಲಿದ್ದು, ಲಿಂಗಕ್ಕೆ ವೀರಭದ್ರಸ್ವಾಮಿಯ ಮುಖವಾಡ ಹಾಕಲಾಗಿದೆ. ಈ ದೇವಾಲಯದ ಎದುರು ಸಹ ಎರಡು ಆನೆಗಳಿವೆ. ಹಾಗೂ ಈ ದೇವಾಲಯದ ಪಕ್ಕದಲ್ಲಿ ಚಿದಂಬರೇಶ್ವರ ದೇವಾಲಯವಿದೆ ಇದರ ಎದುರುಗಡೆಗೆ ಒಂದು ಅಶ್ವತ್ಥಕಟ್ಟೆ ಇದ್ದು ಈ ಕಟ್ಟೆಯ ಸುತ್ತಲು ನಾಗರ ಕಲ್ಲುಗಳಿವೆ.


ಇವುಗಳು ಪುರಾತನ ದೇವಾಲುಯಗಳಾದರೆ ನಂತರ ದಿನಗಳಲ್ಲಿ ಸತ್ಯನಾರಾಯಣ, ನವಗ್ರಹ ಹಾಗೂ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ಇವುಗಳ ಪಕ್ಕದಲ್ಲಿ ನಿರ್ಮಾಣವಾಗಿದೆ. ಈ ಎಲ್ಲಾ ದೇವಾಲಯಗಳು ಸಾಲು ಸಾಲಾಗಿದ್ದು.  ಈ ಸ್ಥಳವಿದ್ದು ಶಿವ ಮತ್ತು ವಿಷ್ಣುವಿನ ಸಂಗಮ ಕ್ಷೇತ್ರವಾಗಿದೆ.