Wednesday, May 28, 2014

ಶ್ರೀ ರಾಮದೇವರ ಕಟ್ಟೆ


ಮನುಷ್ಯ ಇಂದು ಜೀವನದ ಜಂಜಾಟದಲ್ಲಿ ತಮ್ಮ ಸುತ್ತ ಮುತ್ತ ಇರುವಂತಹ ಪ್ರವಾಸಿ ತಾಣಗಳನ್ನು ನೋಡುವುದನ್ನು ಮರೆತಿದ್ದಾನೆ. ಆದರೂ ಇದಷ್ಟೆ ಬದುಕು ಎಂದು ಭಾವಿಸಿಕೊಳ್ಳದೆ ಇರುವ ಸಮಯದಲ್ಲಿ ಸ್ಥಳೀಯ ಸುಂದರ ಪರಿಸರವನ್ನು ಸವಿವ ಬನ್ನಿ.
ಹಾಸನ ಜಿಲ್ಲಾ ಕೇಂದ್ರದಿಂದ 26 ಕಿ.ಮೀ ಅಂತರದಲ್ಲಿ, ಹೊಳೇನರಸೀಪುರ ತಾಲ್ಲೂಕಿನ ಕೇಂದ್ರದಿಂದ 6 ಕಿ.ಮೀ ದೂರದಲ್ಲಿದೆ ಶ್ರೀ ರಾಮದೇವರಕಟ್ಟೆ. ಹಾಸನ ಹೊಳೆನರಸೀಪುರ ಮುಖ್ಯ ರಸ್ತೆಯಿಂದ ಪಶ್ಚಿಮಕ್ಕೆ ಳಿ ಕಿ.ಮೀ. ಚಲಿಸಿದರೆ ಮೊದಲಿಗೆ ಹಳ್ಳಿಯ ನಾಲ್ಕೈದು ಹಳೆಯ ಮನೆಗಳು ಹಾಗೆಯೇ ಇತ್ತೀಚಿನ ಒಂದೆರಡು ಅಧುನಿಕ ನಿರ್ಮಾಣದ ಮನೆಗಳನ್ನು ದಾಟಿ ರೈಲ್ವೆ ಗೇಟ್ ಅನ್ನು ಕೂಡ ದಾಟಿ ಮುನ್ನೆಡೆದಾಗ ಮನಸ್ಸಿಗೆ ನವೋಲ್ಲಾಸ ತುಂಬುವ ಹಸಿರು ತುಂಬಿದ ಗದ್ದೆಗಳು, ಚಲಿಸುತ್ತಿರುವಂತೆಯೇ ನೀರು ಭೊರ್ಗರೆಯುವಂತೆ ಕೇಳಿಸುವ ಶಬ್ದ, ಅದನ್ನು ಆಲಿಸಿಕೊಂಡು ತದೇಕ ಚಿತ್ತದಿಂದ ಶ್ರೀರಾಮ ದೇವರಕಟ್ಟೆಯ ಬಳಿಗೆ ನಮಗೆ ಅರಿವಿಲ್ಲದೆಯೇ ತಲುಪಿರುತ್ತೇವೆ.
ಶ್ರೀ ರಾಮ ತನ್ನ ವನವಾಸದ ಕಾಲದಲ್ಲಿ ತನ್ನ ಪರಿವಾರದೊಂದಿಗೆ ಈ ಹೇವಾವತಿ ನದಿ ತಟದಲ್ಲಿ ಕೆಲವು ದಿನ ತಂಗಿದ್ದನು ಎಂಬ ಪ್ರತೀತಿಯ ಕಾರಣದಿಂದಾಗಿ ಇದನ್ನು ಪವಿತ್ರ ಸ್ಥಳವೆಂದು, ಇದರ ಸಾಕ್ಷಿಯಾಗಿ ಶ್ರೀರಾಮದೇವರ ಕಟ್ಟೆ ಎಂದೂ ಕರೆಯಲ್ಪಟ್ಟಿದೆ. ಇದರ ಸಾಕ್ಷಿಯಾಗಿ ಈ ಕಟ್ಟೆಯ ಎಡದಂಡೆಯ ಬದಿಯಲ್ಲಿ ಆಂಜನೇಯ ಗುಡಿಯಿದೆ. ಹಾಗೆಯೇ ಮತ್ತೊಂದು ಸ್ವಾರಸ್ಯಕರವಾಗಿ ಸ್ಥಳೀಯರು ಹೇಳುವಂತೆ ಕಟ್ಟೆಯಮ್ಮ ಗುಡಿಯ ಕಥೆಯನ್ನು ಮನಕರಗುವಂತೆ ವಿವರಿಸುತ್ತಾರೆ. ಈ ಸ್ಥಳ ಪುರಾಣಗಳ ಪ್ರಕಾರ ಈ ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ಎಷ್ಟೇ ಪ್ರಯತ್ನ ಪಟ್ಟರೂ ತಳಪಾಯ ನಿಲ್ಲದೆ ತೊಂದರೆ ಉಂಟಾಗುತ್ತಿತ್ತು. ಆಗ ಹಳೇತಲೆಮಾರಿನ ದೈವಭಕ್ತರೊಬ್ಬರ ಕನಸಿನಲ್ಲಿ ಈ ಕಟ್ಟೆಯ ತಳಪಾಯ ನಿಂತು ಸುಸೂತ್ರವಾಗಿ ಕಟ್ಟೆಯು ನಿರ್ಮಾಣವಾಗಬೇಕಾದರೆ ನಿನ್ನ ಸೊಸೆ ಹಾಗೂ ಮಗನ ಬಲಿ ನೀಡಬೇಕೆಂದು ಕೇಳಿತು. ಇದರಿಂದ ತನ್ನ ಸೊಸೆ ಹಾಗೂ ಮಗನ ಬಲಿ ವಿಷಯವನ್ನು ಬಹಿರಂಗಗೊಳಿಸದೆ ಕೊರಗ ತೊಡಗುತ್ತಿರುವಾಗ ಈ ಕನಸಿನ ವಿಚಾರವನ್ನು ಹೇಗೊ ತನ್ನ ಅನೇಕ ಪ್ರಯತ್ನಗಳಿಂದ ತಿಳಿದುಕೊಂಡ ಸೊಸೆ ತನ್ನ ಗಂಡನೊಂದಿಗೆ ಸಮಾಲೋಚಿಸಿ ಇಬ್ಬರೂ ಆತ್ಮಾಹುತಿಗೆ ಸಮ್ಮತಿ ಇದೆ ಎಂದು ತನ್ನ ಮಾವನಿಗೆ ತಿಳಿಸಿದಳು. ಆಗ ಸ್ವತಃ ಆತ್ಮಾರ್ಪಣೆ ಮಾಡಿಕೊಂಡ ಈ ದಂಪತಿಗಳು ಈ ಕಟ್ಟೆಯ ಬಲದಂಡೆಯಲ್ಲಿರುವ ಕಟ್ಟೆಯಮ್ಮ ಗುಡಿಯಲ್ಲಿ ಮೂಡಿದ್ದಾರೆಂದು ನಂಬಿರುತ್ತಾರೆ. ಈಗಲೂ ಕಟ್ಟೆಯಮ್ಮ ಗುಡಿ ಆಸ್ತಿತ್ವದಲ್ಲಿದೆ.
ಶ್ರೀ ರಾಮದೇವರು ಇಲ್ಲಿಗೆ ಆಗಮಿಸಿದ್ದು ಹಾಗೂ ಕಟ್ಟೆಯಮ್ಮರವರು ತ್ಯಾಗಮಾಡಿದ ಕಾರಣವನ್ನು ಸ್ಥಳಿಯರು ಸ್ಮರಣೆ ಮಾಡಿಕೊಳ್ಳುವ ಉದ್ದೇಶದಿಂದಲೆ ಈ ಸ್ಥಳಕ್ಕೆ ಶ್ರೀರಾಮದೇವರ ಕಟ್ಟೆಯೆಂದು ಕರೆದಿರುವುದು, ಕಾಕತಾಳಿಯವಾದರೂ, ಕೆಲಮೊಮ್ಮೆ ಇರಬಹುದು ಎನಿಸುವುದಿಲ್ಲವೇ?
ಇದು ಏನೇ ಇರಲಿ ಈ ಶ್ರೀರಾಮದೇವರ ಕಟ್ಟೆಯನ್ನು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸುಮಾರು 1830ರಲ್ಲಿ ನಿರ್ಮಿಸಲಾಗಿದ್ದರೂ ಈ ಕಟ್ಟೆಯಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಿರುವುದು 1870ರಲ್ಲಿ. ಈ ಕಟ್ಟೆಯ ಮೇಲೆ ನಿಂತು ವೀಕ್ಷಿಸಿದರೆ ಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು ಪ್ರಶಾಂತತೆಯನ್ನು ನೀಡುತ್ತಾ ಆಗಾಗ ಬೀಸುವ ಗಾಳಿಯ ರಭಸಕ್ಕೆ ಘರ್ಜಿಸುವ ಶಬ್ದ, ಭೋರ್ಗರೆಯುತ್ತಾ ಧುಮುಕುವ ಜಲಧಾರೆಯಿಂದ ಪ್ರಶಾಂತತೆಯಿಂದ ಹೆಚ್ಚುರಿಸುತ್ತಾ ತಕ್ಷಣವೇ ತಿಳಿಗಾಳಿಯು ಬೀಸುವಾಗ ಅಲ್ಲಿ ಟನ್-ಟನ್ ಎಂದು ಜಲತರಂಗದ ನಾದ ಹೊಮ್ಮುವುದು.
ಈ ಆಹ್ಲಾದಕರ ಅನುಭವದ ಸವಿಯನ್ನು ಸವಿಯಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಈ ಶ್ರೀ ರಾಮದೇವರ ಕಟ್ಟೆಗೆ ಬಂದು ತಮ್ಮ ನಿತ್ಯದ ಯಾಂತ್ರಿಕ ಜೀವನದ ಜಂಜಾಟದಿಂದ ದೂರವಾಗಿ ಸ್ವಲ್ಪ ಸಮಯ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಪಕ್ಷಿಗಳ ಚಿಲಿಪಿಲಿಯ ಕಲರವ ನಾದಕ್ಕೆ ತಲೆ ತೂಗಿಸುತ್ತಾರೆ. ಇಲ್ಲಿ ಪಕ್ಷಿಗಳು ಕಲರವ ಮಾಡುತ್ತಿದ್ದರೆ ಸ್ಥಳಿಯ ರೈತರಲ್ಲಿ ಏನೋ ಒಂದು ಉತ್ಸಾಹ. ಪಕ್ಷಿಗಳು ರೈತರೊಂದಿಗೆ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸಿ ಕೊಂಡಿರುವುದೇ ಇದಕ್ಕೆ ಕಾರಣವಿರಬಹುದು.
ವಿಶಾಲವಾದ ಪ್ರದೇಶದಲ್ಲಿ ಮರಗಿಡಗಳಿವೆ. ಹಳೆಯದಾದ ಪ್ರವಾಸಿ ಮಂದಿರವಿದ್ದು, ಇದು ನೀರಾವರಿ ಇಲಾಖೆಗೆ ಸೇರಿದೆ. ಸುತ್ತಲೂ ಇರುವ ಹೀರೆಕಲ್ಲು ಗುಡ್ಡ, ಹರದನಹಳ್ಳಿ ಬೆಟ್ಟ, ಮಾವಿನಕೆರೆಯ ಬೆಟ್ಟಗಳಿಂದ ರಮಣಿಯವಾಗಿದೆ. ಇತ್ತೇಚಿನ ವರ್ಷದಲ್ಲಿ ಈ ಕಟ್ಟೆಯ ಸಮೀಪದಲ್ಲಿ ಪವರ್ ಸ್ಟೇಷನ್ ನಿರ್ಮಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು ಕೆಲವು ಕಡೆಗೆ ಸಮೀಪದ ಹಂಗರಹಳ್ಳಿಯಿಂದ ವಿದ್ಯುತ್ ಪ್ರಸಾರ ಮಾಡವಾಗುತ್ತಿದೆ.
ಶ್ರೀ ರಾಮದೇವರ ಕಟ್ಟೆ 1870ರಲ್ಲಿ ಹೊಳೆನರಸೀಪುರ ತಾಲ್ಲೂಕು ಕಟ್ಟೆ ಬೆಳುಗುಳಿ ಸಮೀಪ ಹೇಮಾವತಿ ನದಿಗೆ 260 ಮೀಟರ್ ಉದ್ದದ 4 ಮೀಟರ್ ಎತ್ತರದ ಕಟ್ಟಿರುವ ಶ್ರೀ ರಾಮದೇವರ ಅಣೆಕಟ್ಟೆಗೆ 9 ನದಿ ತೂಬುಗಳಿವೆ. 5 ತೂಬುಗಳಿರುವ ದಕ್ಷಿಣ ನಾಲೆ 44 ಕಿ.ಮೀ ಉದ್ದವಿದ್ದು 103 ಕ್ಯೂಸೆಕ್ಸ್ ಸಾಮರ್ಥ್ಯದಿಂದ 2,150 ಎಕರೆ, ಭೂಮಿ ನೀರಾವರಿಯಾಗುತ್ತದೆ. 10 ತೂಬುಗಳನ್ನೊಳಗೊಂಡ ಉತ್ತರ ನಾಲೆಯು 100 ಕಿ.ಮೀ ಉದ್ದ ಹೊಂದಿದ್ದು ಈ ನಾಲೆಗೆ 3 ಉಪನಾಲೆಗಳಿವೆ. ಈ ಉಪನಾಲೆಗಳ ಒಟ್ಟು ಉದ್ದ 47 ಕಿ.ಮೀ. ಒಟ್ಟು 160 ಕಿ.ಮೀ ಉದ್ದದ ನಾಲೆಗಳಿಂದ 500 ಕ್ಯೂಸೆಕ್ಸ್ ಸಾಮರ್ಥ್ಯದಿಂದ 11 ಎಕರೆ ಭೂಮಿ ನೀರಾವರಿಗೆ ಒಳಪಡುತ್ತದೆ. ಹೇಮಾವತಿ ನದಿಯ ದಡದಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಮ್ಮದಿಯ ಸವಿಯನ್ನು ಕೆಲವಾರು ಗಂಟೆಗಳಾದರೂ ಸವಿದು ನೆಮ್ಮದಿ ಪಡೆದು ಧನ್ಯರಾಗಲು ತಪ್ಪದೇ ಶ್ರೀರಾಮದೇವರ ಕಟ್ಟೆಯನ್ನು ಸಂದರ್ಶಿಸಿ.
-ದ್ಯಾವನೂರು ಮಂಜುನಾಥ್



2 comments:

  1. ಬಿಡುವಾದಾಗ ಓದುವೆ.ಆದರೆ ಮೇಲ್ನೋಟಕ್ಕೆ ಬ್ಲಾಗ್ ಆಕರ್ಶಣೀಯವಾಗಿದೆ

    ReplyDelete
  2. ಓದಿ ತಪ್ಪದೆ ಆಭಿಪ್ರಯವನ್ನು ತಿಳಿಸಿ...

    ReplyDelete