ಇತಿಹಾಸಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರ ಹಾಗೂ ಅಮೂಲ್ಯವಾದುದು. ಬೇಲೂರು, ಹಳೇಬೀಡುಗಳ ವಾಸ್ತುಶಿಲ್ಪ,. ಹಲ್ಮಿಡಿಯ ಪುರಾತನ ಶಾಸನ, ಸಕಲೇಶಪುರದ ವನಸಿರಿ ಮತ್ತು ಟಿಪ್ಪುವಿನ ಮಂಜರಾಬಾದ್ ಕೋಟೆ, ಶ್ರವಣಬೆಳಗೊಳದ ವಿಶ್ವವಿಖ್ಯಾತ ಏಕ ಶಿಲಾಮೂರ್ತಿ, ರಾಮನಾಥಪುರದ ಇತಿಹಾಸ, ಹಾಸನಾಂಬೆಯ ಅಚ್ಚರಿಯ ದಿವ್ಯಶಕ್ತಿ. ಹೀಗೆ ಹತ್ತು-ಹಲವು ರಾಜವಂಶಗಳ ಕಲೆ ಸಂಸ್ಕøತಿಯ ಗತ ವೈಭವವನ್ನೇ ನೆನಪಿಸುತ್ತದೆ. ಕರ್ನಾಟಕ ಇತಿಹಾಸದಲ್ಲಿ ತನ್ನದೇ ಆದ ಭದ್ರ ಛಾಯೆ ಮೂಡಿಸಿದೆ.
ಆಲೂರು ತಾಲ್ಲೂಕು ಸಹ ಇದಕ್ಕೇನೂ ಹೊರತಾಗಿಲ್ಲ. ಕೆಂಚಾಂಬಿಕೆಯ ಮಡಿಲು ದಟ್ಟ ವನಸಿರಿ, ಪಾಳ್ಯದ ಇತಿಹಾಸ ಹೀಗೆ ತನ್ನದೇ ಆದ ಐತಿಹಾಸಿಕ ಬೆಳಕನ್ನು ಮೂಡಿಸಿದೆ.ಆಲೂರು ಪಟ್ಟಣದ ಬಿಕ್ಕೋಡು ಮಾರ್ಗವಾಗಿ 6 ಕಿ.ಮೀ ಕ್ರಮಿಸಿ ಬಲಕ್ಕೆ ಹೊರಳಿ ಮೂರು ಕಿ.ಮೀ ಸಾಗಿದರೆ ಹಸಿರು ತುಂಬಿದ ಪರಿಸರದೊಳಗೆ ಕಾಣಸಿಗುವುದೇ ತಾಳೂರು. ತಾಳೂರಿಗೆ ಈ ಹಸಿರ ವನಸಿರಿ ತಂದು ಕಂಗೊಳಿಸುವಂತೆ ಮಾಡಿರುವಳೆಂದರೆ ‘ವಾಟೆಹೊಳೆ’ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಅಲ್ಲಿನ ಜನ ಸಮುದಾಯ ಇವಳ ಬಲದಂಡೆ ನಾಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಸುಮಾರು 60ರಿಂದ 70 ಕುಟುಂಬಗಳಿರುವ ಈ ಊರಲ್ಲಿ ಶೇ%75ರಷ್ಟು ಕೂಲಿ ಕೆಲಸವನ್ನು ನಂಬಿ ಬದುಕು ಸವೆಸುತ್ತಿರುವುದು ಸಾಮಾನ್ಯ. ಹೆಚ್ಚಾಗಿ ದಲಿತರಿರುವ ಈ ಊರಲ್ಲಿ ಬಡತನ ತಾಂಡವವಾಡುತ್ತಿದೆ. ಹತ್ತಾರು ಮನೆಗಳು ತಕ್ಕ ಮಟ್ಟಿಗೆ ಹಿಡುವಳಿದಾರರಿದ್ದಾರೆ. ಅದೂ ಮಳೆ ಕೈಕೊಟ್ಟರೆ, ವಾಟೆಹೊಳೆಗೆ ಜಲಾಗಮನ ಆಗದಿದ್ದರೆ, ಇಲ್ಲಿನ ಜನತೆಗೆ ಆಸರೆಯೇ ಇಲ್ಲದಂತಾಗುತ್ತದೆ.
ಇವರಿಗೆ ನಿತ್ಯ ಉಸಿರಾಗಿರುವಳು ವಾಟೆಹೊಳೆ. ಇವಳು ಬೇಲೂರು ತಾಲ್ಲೂಕಿನ ನಾಗೇನಹಳ್ಳಿ ಬಳಿಯಲ್ಲಿ ಜನ್ಮತಾಳಿ ಸಾಗಿ ಬಂದು ವಾಟೆಹೊಳೆ ಎಂಬಲ್ಲಿ ನೆಲೆನಿಂತು ಮುಂದೆ ತಾಳೂರು ಮಾರ್ಗವಾಗಿ ಹರಿದು ತಾಲ್ಲೂಕಿನಾದ್ಯಾಂತ ಹಸಿರು ಜೀವ ಬೆಸೆದು ಚೆನ್ನಾಪುರ ಬಳಿ ಯಗಚಿಗೆ ಸಂಗಮವಾಗುತ್ತಾಳೆ.
ತಾಳೂರು ಹನುಮಂತರಾಯನ ಮಹಿಮೆಯಿಂದ ಪ್ರಸಿದ್ಧವಾದ ಸ್ಥಳ. ಜಿಲ್ಲೆ, ಅಂತರ್‍ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಮಾರುತಿಯ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಹನುಮಂತರಾಯನ ವಿಗ್ರಹ ಪ್ರತಿಷ್ಠಾಪನೆ ಹೊಯ್ಸಳರ ಕಾಲದಲ್ಲಿ ಆಗಿದೆ. ಈ ಪ್ರದೇಶವು ಬನವಾಸಿ ಕದಂಬರ ಆಡಳಿತಕ್ಕೆ ಒಳಪಟ್ಟಿದ್ದು, ನಂತರ ಗಂಗರ ವಶವಾಗಿ, ಗಂಗರ ಅವನತಿಯ ನಂತರ ಮಲೆನಾಡಿನ ಪಾಳೆಯಗಾರರ ಅಧೀನಕ್ಕೆ ಬಂದು ತದನಂತರ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತು ಎನ್ನಲಾಗಿದೆ. ಹಾಗೂ ಈ ಪ್ರಾಂತ್ಯದಲ್ಲಿ ಮಹದೇವನೆಂಬ ರಾಜನಿದ್ದ. ಇವರ ಅವನತಿ ನಂತರ ಕೃಷ್ಣದೇವರಾಯನು ಐಗೂರು ಕೃಷ್ಣಪ್ಪ ನಾಯಕನಿಗೆ ವಹಿಸಿಕೊಟ್ಟನೆಂಬ ಹಿನ್ನಲೆಯಿದೆ.
ತಾಳೂರು ಗ್ರಾಮದಲ್ಲಿ ಈ ಹಿಂದೆ ಚೋಳ ವಂಶದ ಪುಂಡಲೀಕ ಎಂಬಾತ ಸುತ್ತಮುತ್ತಲಿನ ಸುಮಾರು 250-300 ಎಕರೆ ಪ್ರದೇಶವನ್ನು ತನ್ನ ಆಳ್ವಿಕೆಯ ಅಧೀನದಲ್ಲಿಟ್ಟುಕೊಂಡು, ಪ್ರಜೆಗಳಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿಕೊಂಡು ಸಂತೋಷದಿಂದ ಸುಖಮಯವಾಗಿ ಜೀವನ ಸಾಗಿಸುತ್ತಿದ್ದರು. ಈ ಹಿಂದೆ ಈ ಊರಲ್ಲಿ ವಾಸಿಸಿದ್ದ ಜನರು ತುಂಬಾ ತಾಳ್ಮೆಯಿಂದ ವರ್ತಿಸುತ್ತಿದ್ದರಂತೆ. ಅದಕ್ಕಾಗಿ ಈ ಊರಿಗೆ ‘ತಾಳೂರು’ ಎಂಬ ಹೆಸರು ಬಂದಿರಬೇಕು. ಆದರೆ ಇಲ್ಲಿ ಆಡಳಿತ ನಡೆಸುತ್ತಿದ್ದ ಪುಂಡಲೀಕನ ಅಟ್ಟಹಾಸ, ಭ್ರಷ್ಟಾಡಳಿತ, ಮೋಸದ ಕೃತ್ಯಗಳು ದಿನೇ-ದಿನೇ ಅಧಿಕಗೊಂಡಿದ್ದರಿಂದ ತಾಳ್ಮೆಕಳೆದುಕೊಂಡ ತಾಳೂರಿನ ಜನತೆ ದೊರೆಯ ವಿರುದ್ದ ಹೋರಾಟ ಮಾಡಿ, ರಕ್ತದ ಕೋಡಿಯನ್ನೇ ಹರಿಸಿದರಂತೆ!. ಇದರಿಂದ ತಾಳೂರು ಗ್ರಾಮಕ್ಕೆ ಹಾಳೂರು ಎಂಬ ವಾಡಿಕೆ ರೂಢಿಯಾಯಿತಂತೆ. ಏಕೆಂದರೆ ಗಲಭೆಯ ನಂತರ ಒಂದು ನರಪಿಳ್ಳೆಯು ಇಲ್ಲದಂತೆ ಪಲಾಯನವಾಗಿತ್ತಂತೆ. ಹಾಳೂರು ಎಂಬ ವಾಡಿಕೆಯನ್ನು ಹೋಗಲಾಡಿಸಲು ಆನಂತರ ತುಂಬಾ ಪ್ರಯತ್ನ ನಡೆಸಿದೆ. ಕಾಲಾಂತರವಾಗಿ ತಾಳೂರಿನ ಪುಂಡಲೀಕ ದೊರೆಗೆ ಪ್ಲೇಗ್ ರೋಗ ತಗುಲಿ, ಈ ರೋಗದಿಂದ ಮುಕ್ತಿ ಕಾಣಲು ಹಲವಾರು ಪುರೋಹಿತರ ಮೊರೆ ಹೋದಾಗ ಶನಿಕಾಟದ ಕಾರಣ ತಿಳಿದು ಪಾಪದ ಪರಿಹಾರಕ್ಕಾಗಿ ತನ್ನ ದಂಡ ನಾಯಕನಿಗೆ ಊರ ಕೋಟೆಯ ದ್ವಾರ ಬಾಗಿಲು ಹತ್ತಿರ ಹನುಮಂತರಾಯನ ಪ್ರತಿಮೆ ಕೆತ್ತಿಸಿ ಪ್ರತಿಷ್ಟಾಪಿಸುವಂತೆ ಅಜ್ಞಾಪಿಸಿದನಂತೆ! ಅದನ್ನು ಪಾಲಿಸಿದ ದಂಡನಾಯಕ ವರದರಾಜು ಎಂಬ ಶಿಲ್ಪಿಯನ್ನು ಕರೆಸಿ ಸುಮಾರು ಒಂಭತ್ತೂವರೆ ಅಡಿ ಎತ್ತರವಿರುವ ಹನುಮಂತರಾಯನ ಪ್ರತಿಮೆಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿದರು.
ನಂತರ ಪುಂಡಲೀಕ ದೊರೆಯು ತನ್ನ ಸರ್ವಸ್ವವನ್ನು ತ್ಯಜಿಸಿ ತಾಳೂರನ್ನು ಬಿಟ್ಟು ಹನುಮಂತರಾಯನ ಮಹಿಮೆಯನ್ನು ಸಾರುತ್ತಾ, ಜನರಿಗೆ ತಿಳಿಯಪಡಿಸುತ್ತಾ ತನ್ನ ಪಾಪ ಕರ್ಮದ ತೊಳಲಾಟವನ್ನು ಕಳೆದುಕೊಂಡನೆಂಬ ಪ್ರತೀತಿಯಿದೆ. ಇಂತಹ ಇತಿಹಾಸ ಹೊಂದಿದ ಈ ದಿವ್ಯ ಮಾರುತಿಯ ಸ್ಥಿತಿ ಶಿಥಿಲಗೊಂಡು ಚಿಂತಾಜನಕಗೊಂಡಾಗ ದೂರದೂರಿನಲ್ಲಿದ್ದ ಭಕ್ತರು ಭಂಟರಂತೆ ಬಂದು ಊರಿನವರೊಂದಿಗೆ ಸಮಾಲೋಚಿಸಿ ಸಮಿತಿ ರಚಿಸಿ ಜೀರ್ಣೋದ್ಧಾರ ಆರಂಭಿಸಿಯೇ ಬಿಟ್ಟರು.
ತಾಳೂರಿನ ಗ್ರಾಮಸ್ಥರಾದ ನಿಂಗೇಗೌಡ, ಸೋಮಣ್ಣ, ಹಾಲೇಗೌಡ, ಈಶ್ವರಪ್ಪ, ಜಯಣ್ಣ, ಶಿವರುದ್ರಪ್ಪ, ವೆಂಕಟೇಶ್ ಮುಂತಾದವರ ಸಹಕಾರದೊಂದಿಗೆ ಗ್ರಾಮಸ್ಥರನ್ನೊಳಗೊಂಡಂತೆ ಭಕ್ತಾದಿಗಳಾದ ಡಾ|| ಕೃಷ್ಣೇಗೌಡ, ಹೆಚ್.ಕೆ.ಸುರೇಶ್, ಚೆಲುವೇಗೌಡ, ಶಂಕರ್, ನಂಜುಂಡೇಗೌಡ, ಅಣ್ಣಯ್ಯ, ಬಿ.ಎಸ್ ಗಂಗೇಗೌಡ, ಶಿವಲಿಂಗೇಗೌಡ, ರಂಗೇಗೌಡ, ಡಾ||ಮೋಹನ್‍ಕುಮಾರ್, ಲಂಕೇಗೌಡ ಮುಂತಾದ ಭಕ್ತಾದಿಗಳು ಕೈ ಜೋಡಿಸಿದ್ದರಿಂದ ಸುಮಾರು 15 ರಿಂದ 16 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ದಾರವಾಗಿ ಮಾರುತಿ ಪುನಃ ಸಿಡಿದು ನಿಂತಿದ್ದಾನೆ. ಮತ್ತೆ ಗತದ ವೈಭವ ಮರುಕಳಿಸಿದೆ. ದಿನಾಂಕ: 22-12-2007ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಹನುಮಂತರಾಯನ ದೇವಸ್ಥಾನ ಅನಾವರಣಗೊಂಡಿದೆ. ಇದರ ಬೆನ್ನಲ್ಲೇ ಶಿಥಿಲಗೊಂಡಿದ್ದ ಈಶ್ವರ ದೇವಾಲಯ ಕೂಡ ಶೀಘ್ರಗತಿಯಲ್ಲಿ ಜೀರ್ಣೋದ್ದಾರಗೊಂಡು ಅದು ಸಹ ಅಂದೇ ಉದ್ಘಾಟನೆಗೊಂಡಿತು. ತಾಳೂರಿಗೆ ಮತ್ತೆ ಗತದ ನೆನಪು ಮರುಕಳಿಸಿದಂತಾಗಿದೆ. ಪ್ರತಿವರ್ಷ ಇಲ್ಲಿ ಹನುಮಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ಸಾವಿರಾರು ಭಕ್ತಾಧಿಗಳು ಬರುತ್ತಾರೆ. ಭಕ್ತಿಯ ಜೊತೆಗೆ ಅನ್ನ ಸಂತರ್ಪಣೆಯೂ ಸಹ ವಿಶೇಷವಾಗಿರುತ್ತದೆ. ನೀರಿನ ಸೌಕರ್ಯ ಚೆನ್ನಾಗಿದೆ. ಇತ್ತೀಚೆಗೆ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತದಲ್ಲಿ ಉತ್ತಮ ಸೌಕರ್ಯವುಳ್ಳ ಅತಿಥಿಗೃಹಗಳು ಹಾಗೂ ಸಮುದಾಯ ಭವನ ದೇವಸ್ಥಾನದ ಸಮಿತಿಯ ಶ್ರಮದ ಫಲವಾಗಿ ನಿರ್ಮಾಣಗೊಂಡಿದೆ. ಹನುಮಂತರಾಯನ ಸನ್ನಿಧಿಗೆ ಬರುವ ಭಕ್ತಾಧಿಗಳಿಗೆ ಈಗ ಚಿಂತೆಯಿಲ್ಲ, ಏಕೆಂದರೆ ಬೆಳಗ್ಗೆ 9-30ಕ್ಕೆ ಸಂಜೆ 5ಕ್ಕೆ ಪ್ರತಿದಿನ ತಾಳೂರಿಗೆ ಬಸ್ಸಿನ ಸೌಕರ್ಯ ಕಲ್ಪಿಸಲಾಗಿದೆ. ಹಾಗೆ ಟೆಂಪೋ, ಆಟೋಗಳು ನಿರಂತರವಾಗಿ ಸಂಚರಿಸುತ್ತಿವೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
No comments:
Post a Comment